ನಟಿ ಕಂ ರೂಪದರ್ಶಿ ನಿಧಿ ಸುಬ್ಬಯ್ಯ ಪಾಲಿಗೆ ಇನ್ನೊಂದು ಗಣಿ ಸಿಕ್ಕಿದೆ. ಹೌದು. ದುನಿಯಾ ವಿಜಯ್ ಅಭಿನಯಿಸುತ್ತಿರುವ ವೀರಬಾಹು ಚಿತ್ರದಲ್ಲಿ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಎಸ್. ಮಹೇಂದರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 31ನೇ ಚಿತ್ರ ಇದು. ಚಿತ್ರದ ಚಿತ್ರೀಕರಣ ಸದ್ಯ ಮೈಸೂರು ಸುತ್ತಮುತ್ತಲಿನ ರಮಣೀಯ ತಾಣಗಳಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ನಿಧಿ ಒಬ್ಬ ಸಾಂಪ್ರದಾಯಿಕ ಅಯ್ಯಂಗಾರಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಹಳ್ಳಿ ರಾಜಕೀಯದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರಕ್ಕೆ ಸೂಕ್ತ ಎನಿಸುವ ಮುದವಾದ ಸಂಗೀತವನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ. ಜಗತ್ತು ಎಷ್ಟೇ ಬದಲಾದರೂ, ಹಳ್ಳಿಗಳ ಜೀವನ ಕ್ರಮ ಬದಲಾಗುವುದಿಲ್ಲ. ವ್ಯವಸ್ಥೆಯ ಯಾವ ಲಾಭವೂ ಇಲ್ಲಿಗೆ ಸಿಗುವುದಿಲ್ಲ. ಸಂಪ್ರದಾಯ ಬದ್ಧ ಆಚರಣೆಗಳು ಇಲ್ಲಿ ಕಾಲು ಮುರಿದುಕೊಂಡು ಸದಾ ಬಿದ್ದಿರುತ್ತವೆ ಎಂಬೆಲ್ಲಾ ವಿಷಯವನ್ನೂ ಇಲ್ಲಿ ತೋರಿಸುವ ಯತ್ನ ಮಾಡಿದ್ದಾರಂತೆ ಮಹೇಂದರ್.
ಬಹು ದಿನದ ನಂತರ ಚಿತ್ರ ನಿರ್ದೇಶನಕ್ಕೆ ಬಂದಿರುವ ಮಹೇಂದರ್‌ರ ಈ ಚಿತ್ರದಲ್ಲಿ ರಂಗಾಯಣ ರಘುಗೆ ಒಂದು ಉತ್ತಮ ಪಾತ್ರ ಇದೆಯಂತೆ. ನಾಯಕಿ ನಿಧಿ ಸುಬ್ಬಯ್ಯ ಸದ್ಯ ಯೋಗರಾಜ ಭಟ್ರ 'ಪಂಚರಂಗಿ'ಯಲ್ಲಿ ಬ್ಯುಸಿ ಆಗಿದ್ದಾರೆ. ಆದಾಗ್ಯೂ ಮಹೇಂದರ್‌ರಂಥ ನಿರ್ದೇಶಕರು ಕರೆದಾಗ ಒಲ್ಲೆ ಅನ್ನಲು ಸಾಧ್ಯವೇ? ಒಪ್ಪಿ ಬಂದಿದ್ದಾರೆ.
ಸಾಲಾಗಿ ಮೂರು ಚಿತ್ರಗಳಲ್ಲಿ ಸೋತು ಸುಣ್ಣವಾಗಿರುವ ನಿಧಿ ಅವರಿಗೆ ಈಗ ಪಂಚರಂಗಿ ಹಾಗೂ ವೀರಬಾಹು ನಿರೀಕ್ಷೆಯ ಚಿತ್ರಗಳಾಗಿವೆ. ಅಂದಹಾಗೆ, ಈ ಚಿತ್ರದಲ್ಲಿ ವಿಜಯ್ ನಾಯಕ ನಟ ನಾಗಿದ್ದರೆ, ವೀರ ಮದಕರಿ ಹಾಗೂ ಶಂಕರ್ ಐಪಿಎಸ್ ಖ್ಯಾತಿಯ ರಾಗಿಣಿ ದ್ವಿವೇದಿ ಸಹ ಮತ್ತೊಬ್ಬ ನಾಯಕಿ ನಟಿಯಾಗಿ ಬಣ್ಣ ಹಚ್ಚುತ್ತಿರುವುದು ಇನ್ನೊಂದು ಪ್ಲಸ್ ಪಾಯಿಂಟ್.