ನಿರ್ದೇಶಕ ಪ್ರಶಾಂತ್ ಮಾಂಬಳ್ಳಿ ಹಾಸ್ಯ ಚಿತ್ರವೊಂದರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಚಿತ್ರದ ಸಿದ್ಧತೆ ಜೋರಾಗಿ ನಡೆದಿದ್ದು, 'ಕ್ರೇಜಿ ಕೃಷ್ಣ' ಎಂದು ಹೆಸರಿಸಿದ್ದಾರೆ. ಚಿತ್ರದ ಹೆಸರೇ ಹಾಸ್ಯಮಯವಾಗಿರುವಾಗ ಇನ್ನು ನೋಡಲು ಹೇಗಿರುತ್ತದೆಯೋ ಅಂತ ಅಭಿಮಾನಿಗಳು ಗಾಂಧಿನಗರ ತುಂಬಾ ಆಡಿಕೊಂಡು ತಿರುಗುತ್ತಿದ್ದಾರಂತೆ.
ಅಂದಹಾಗೆ, ಈ ಹಿಂದೆ ಸುಗ್ರೀವ ಚಿತ್ರ ಮಾಡಿ ಅಷ್ಟೇನು ಯಶಸ್ಸು ಕಾಣದ ಮಾಂಬಳ್ಳಿ ಇದೀಗ ಕ್ರೇಜಿ ಕೃಷ್ಣ ತಮ್ಮ ಕೈ ಹಿಡಿಯುತ್ತಾನಾ ಅಂತ ಎದುರು ನೋಡುತ್ತಿದ್ದಾರೆ. ತಮ್ಮ ಎರಡನೇ ಚಿತ್ರಕ್ಕೆ ಹೊಸ ತಂಡದೊಂದಿಗೆ ಆಗಮಿಸಿದ್ದಾರೆ ಮಾಂಬಳ್ಳಿ. ಈ ಚಿತ್ರ ಮಾಡಲು ಮೂಲ ಕಾರಣ ನಿರ್ಮಾಪಕ ಅಣಜಿ ನಾಗರಾಜ್ ಅಂತೆ. ಇವರು ನೀಡಿದ ಪ್ರೋತ್ಸಾಹ ಹಾಗೂ ಸಹಕಾರ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಮಾಂಬಳ್ಳಿ. ನನ್ನ ಕನ್ನಡದ ಮೊದಲ ಚಿತ್ರ ಇದೇ ಆಗಬೇಕಿತ್ತು. ಕಾರಣಾಂತರದಿಂದ ಮುಂದೆ ಹೋಗಿ ಈಗ ಆಗುತ್ತಿದೆ ಎನ್ನುತ್ತಾರೆ.
ಚಿತ್ರದ ಕಥೆ, ಸನ್ನಿವೇಶ, ಹಾಡುಗಳು, ದೃಶ್ಯ ಎಲ್ಲವೂ ಭಿನ್ನವಾಗಿದೆ. ಪ್ರತಿ ದೃಶ್ಯದಲ್ಲೂ ಹೊಸತನ ಲವಲವಿಕೆ ಇದೆ. ಹಳ್ಳಿಯಲ್ಲಿ ಹುಟ್ಟುವ ಪ್ರೀತಿಯ ಸುತ್ತ ಕಥೆ ಹೆಣೆಯಲಾಗಿದೆ. ಚಿತ್ರದ ಮೂಲಕ ಕಿಶನ್ ಹಾಗೂ ಸುರಭಿ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದೆ ಎನ್ನುತ್ತಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ರಮೇಶ್ ಕೃಷ್ಣ ಸಂಗೀತ ನೀಡಿದ್ದು, ಗಿರಿ ಛಾಯಾಗ್ರಾಹಕರು. ಸುಗ್ರೀವ ತಂಡದಲ್ಲಿದ್ದ ತಂತ್ರಜ್ಞರೇ ಇಲ್ಲಿಯೂ ಬಹುತೇಕ ಇದ್ದಾರೆ ಎಂದು ಹೇಳುತ್ತಾರೆ.