ಮುಂಗಾರು ಮಳೆ ಮೂಲಕ ಕನ್ನಡದ ಕಣ್ಮನ ಸೆಳೆದ ನಟಿ, ಅಭಿಮಾನಿಗಳ ಮಹಾಪೂರವನ್ನೇ ಹೊಂದಿರುವ ಪೂಜಾ ಗಾಂಧಿ ಒಂದು ಕನ್ನಡದ ರಿಮೇಕ್ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ. ಆ ಮೂಲಕ ಖಾರಾ ಮಸಾಲೆ ಹಾಕಿ ಸವಿಯಲು ಹೊರಟಿರುವ ಪೂಜಾ ಈಗ ಅಕ್ಷರಶಃ ಅರಳಿದ ಕೆಂದಾವರೆಯಾಗಿದ್ದಾರೆ.
ಹೌದು. ಕನ್ನಡದಿಂದ ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಚಿತ್ರ ಇದು. ಸೀತಾ ಗೀತಾ, ರಾಣಿ ಮಹಾರಾಣಿ ಇತ್ಯಾದಿ ಹೆಸರಿನಿಂದ ನಾನಾ ಭಾಷೆಯಲ್ಲಿ ತೆರೆಕಂಡ ನಾಯಕಿಯ ದ್ವಿಪಾತ್ರ ಅಭಿನಯದ ಚಿತ್ರದ ಬಗ್ಗೆ ನಿಮಗೆಲ್ಲಾ ತಿಳಿದಿರಲೇ ಬೇಕು. ಹೌದು, ಹಿಂದೆ ರಾಣಿ ಮಹಾರಾಣಿ ಆಗಿ ನಟಿ ಮಾಲಾಶ್ರೀ ಅಭಿನಯಿಸಿದ್ದನ್ನು ಯಾರು ಮರೆಯಲು ಸಾಧ್ಯ. ಅದೇ ಪಾತ್ರವನ್ನು ಈಗ ಪೂಜಾಗಾಂಧಿ ಮಾಡಲು ಹೊರಟಿದ್ದಾರೆ. ಚಿತ್ರದ ಹೆಸರು 'ನಾ ರಾಣಿ ನೀ ಮಹಾರಾಣಿ'.
90ರ ದಶಕದಲ್ಲಿ ಅತ್ಯಂತ ಹೆಸರು ಮಾಡಿದ್ದ ಈ ಚಿತ್ರ ಇದೀಗ ಮತ್ತೆ ಸೆಟ್ಟೇರಿದೆ. ಶೂಟಿಂಗ್ ಸಹ ಆರಂಭವಾಗಿದೆ. ಅಂದು ಮಾಲಾಶ್ರೀ ಕುಡಿದ ಮತ್ತಿನಲ್ಲಿ ನರ್ತಿಸಿದ್ದ 'ಕೂಗೊ ಕೋಳಿಗೆ ಖಾರಾ ಮಸಾಲಾ... ಮಿರ್ಚಿ ಮಸಾಲಾ...' ಹಾಡಿಗೆ ಈಗ ಪೂಜಾ ನರ್ತಿಸುತ್ತಿದ್ದಾರೆ. ಮೊನ್ನೆ ಸೆಟ್ ಒಂದರಲ್ಲಿ ಕೆಂಪು ಬಟ್ಟೆ ಧರಿಸಿದ್ದ ಪೂಜಾ ರೆಡ್ ಬುಲ್ ಆಗಿ ಈ ಹಾಡಿಗೆ ಹೆಜ್ಜೆ ಹಾಕಿದರು.
ಕೆಲದಿನ ಹಿಂದೆ ಕೊಂಚ ತೆಳ್ಳಗಾಗಿದ್ದ ಪೂಜಾ ಈಗ ಮತ್ತೆ ಕೊಂಚ ದಪ್ಪಗಾಗಿದ್ದಾರೆ. ಅಂದು ಅದೇ ಹಾಡಿಗೆ ಕೈಯಲ್ಲಿ ಬಾಟಲ್ ಹಿಡಿದು ನರ್ತಿಸಿದ್ದ ಮಾಲಾಶ್ರೀ ಥರಾನಾ ಥೇಟ್ ಪೂಜಾ ಗಾಂಧಿ ಕೂಡಾ ಬಳುಕಿದ್ದಾರೆ. ಅಂದು ಈ ಚಿತ್ರ ನಿರ್ದೇಶಿಸಿದ್ದ ಪಿ. ರಾಮಮೂರ್ತಿ ಈಗಲೂ ನಿರ್ದೇಶಕರು. ಬಹು ಸಮಯದ ನಂತರ ಥ್ರಿಲ್ಲರ್ ಮಂಜು ಬೇರೆಯವರ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗಿದ್ದು, ತೆರೆ ಕಾಣುವ ದಿನ ತಿಳಿದು ಬಂದಿಲ್ಲ.