ಚಿತ್ರ ನಿರ್ಮಾಣಕ್ಕೆ ಮುಂದಾಗಿರಬಹುದು, ಎಲ್ಲವನ್ನೂ ಮರೆತು ಹೊಸ ಹುರುಪಿನಲ್ಲಿ ಚಿತ್ರ ನಿರ್ಮಿಸುತ್ತೇನೆ ಎಂದು ಹೇಳುತ್ತಿರಬಹುದು, ಆದರೆ ಅವರ ಮುಖದಲ್ಲಿ ಮೊದಲಿನ ಕಳೆ ಇಲ್ಲ. ಬಿಟ್ಟು ಹೋದ ಪತ್ನಿ ನೀಡಿದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೌದು, ಕನ್ನಡದ ಅಪರೂಪದ ನಿರ್ದೇಶಕ ಎಸ್. ಮಹೇಂದರ್ ಬಗ್ಗೆ ಚಿತ್ರರಂಗ ಆಡುವ ಮಾತಿದು.
ಮೊನ್ನೆ ಮೈಸೂರಿನ ದೇವಸ್ಥಾನವೊಂದರಲ್ಲಿ ಇವರ ನಿರ್ದೇಶನದ ವೀರಬಾಹು ಚಿತ್ರದ ಮುಹೂರ್ತ ನೆರವೇರಿತು. ನೋವಿನಲ್ಲೇ ಇರುವ ಎಸ್. ಮಹೇಂದರ್ ಆ ವರ್ತುಲದಿಂದ ಆಚೆ ಬರಲಾಗದೇ ಬಳಲುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದಾಗ್ಯೂ ಎಲ್ಲವನ್ನೂ ಮರೆಯುವ ಸಲುವಾಗಿ ಚಿತ್ರ ನಿರ್ದೇಶನದ ಜವಾಬ್ದಾರಿ ಹೊರುತ್ತಿದ್ದಾರೆ. ಮನೆಯಲ್ಲೇ ಕುಳಿತಿದ್ದರೆ ಬೇಸರದ ಜತೆ ಇನ್ನಷ್ಟು ಸಮಸ್ಯೆಗಳು ತಲೆಗೇರುತ್ತವೆ ಎಂಬ ಉದ್ದೇಶದಿಂದ ಅವರು ಹೊರ ಬಿದ್ದಂತೆ ಕಂಡುಬಂತು.
ಭೂಮಿ ಹುಟ್ಟಿದ ಸಂದರ್ಭದಿಂದಲೂ ಪ್ರೀತಿ ಈ ಜಗತ್ತಿನಲ್ಲಿ ಇದೆ. ಮನುಷ್ಯ ಮನುಷ್ಯರನ್ನು ಬೆಸೆದಿರುವ ಬಂಧ ಪ್ರೀತಿಯೊಂದೇ. ಇದು ಎಲ್ಲರ ನಡುವೆ ಇರುವ ಜೀವಸೆಲೆ. ಇದಕ್ಕೆ ಯಾವ ಭೇದ ಭಾವವಿಲ್ಲ. ಅದನ್ನೇ ಆಧಾರವಾಗಿಟ್ಟುಕೊಂಡು ಚಿತ್ರನಿರ್ಮಿಸುತ್ತಿದ್ದೇನೆ. ಈ ಚಿತ್ರ ಯಾವ ವ್ಯಕ್ತಿಯನ್ನೂ ಆಧರಿಸಿ ಇಲ್ಲ ಎಂದು ಮಹೇಂದರ್ ಹೇಳಿದಾಗ ನಟಿ ಹಾಗೂ ಮಾಜಿ ಪತ್ನಿ ಶ್ರುತಿ ಅವರನ್ನು ನೆನೆಸಿಕೊಂಡಂತೆ ಭಾಸವಾಯಿತು.
ನಾಯಕನ ಪಾತ್ರಕ್ಕೆ ಒಬ್ಬ ಕಟ್ಟುಮಸ್ತಾದ ವ್ಯಕ್ತಿ ಬೇಕಾಗಿತ್ತು. ಕನ್ನಡದಲ್ಲಿ ಸದ್ಯ ದುನಿಯಾ ವಿಜಯ್ ಬಿಟ್ಟರೆ ಅಂತವರು ಬೇರೆ ಯಾರೂ ಇಲ್ಲ. ಅದಕ್ಕಾಗಿ ಈ ಚಿತ್ರಕ್ಕೆ ವಿಜಯ್ ಅವಿರೋಧವಾಗಿ ಆಯ್ಕೆಯಾದರು. ಚಿತ್ರಕ್ಕಾಗಿ ನಾನಾ ತಾಣಗಳಿಗೆ ತೆರಳಲಿದ್ದೇವೆ. ಅಂದಹಾಗೆ ನವೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಮಹೇಂದರ್.
ದುನಿಯಾ ವಿಜಯ್ ಮಾತನಾಡುತ್ತಾ, ಇಲ್ಲಿ ನನ್ನದು ಸ್ಮಶಾನ ಕಾಯುವ ವ್ಯಕ್ತಿಯ ಪಾತ್ರ. ತುಂಬಾ ಗಡುಸು ಮನುಷ್ಯ. ಪ್ರೀತಿ ಗೀತಿ ಗೊತ್ತಿರಲ್ಲ. ಒಬ್ಬ ಹುಡುಗಿ ನನ್ನ ಮನ ಕೆಡಿಸುತ್ತಾಳೆ. ಪ್ರೀತಿಸು ಅಂತ ಪೀಡಿಸುತ್ತಾಳೆ. ಕೊನೆಗೆ ಒಪ್ಪಿದರೆ, ಪಾಲಕರ ಕಿರಿಕ್ ಆರಂಭವಾಗುತ್ತದೆ. ಒಂದಿಷ್ಟು ಮಾತು, ಹೊಡೆದಾಟ ಬಡಿದಾಟ, ನಗುವಿನೊಂದಿಗೆ ಚಿತ್ರ ಸಾಗುತ್ತದೆ. ಇದಕ್ಕಾಗಿ ನ್ಯಾಚುರಲ್ಲಾಗಿ ಅಭಿನಯ ಮಾಡುವುದು ಮುಖ್ಯ. ಅದಕ್ಕಾಗಿ ನಾನು ನಾಲ್ಕರು ದಿನ ರಾತ್ರಿ ಹೊತ್ತು ಸ್ಮಶಾನದಲ್ಲಿ ಇದ್ದು ಅನುಭವ ಪಡೆದುಕೊಂಡು ಬಂದಿದ್ದೇನೆ ಎನ್ನುತ್ತಾರೆ.
ಒಟ್ಟಾರೆ ಇಷ್ಟೆಲ್ಲಾ ವಿಶೇಷಗಳನ್ನು ಒಳಗೊಂಡಿರುವ ಈ ಚಿತ್ರ ಮಹೇಂದರ್ ಹಾಗೂ ಸಂದೇಶ್ ನಾಗರಾಜ್ ಅವರನ್ನು ಆರು ವರ್ಷದ ನಂತರ ಮತ್ತೊಮ್ಮೆ ಒಂದುಗೂಡಿಸುತ್ತಿದೆ. ಚಿತ್ರದಲ್ಲಿ ನಿಧಿ ಸುಬ್ಬಯ್ಯ ಹಾಗೂ ರಾಗಿಣಿ ದ್ವಿವೇದಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಉತ್ತಮ ಚಿತ್ರದ ಕೊರತೆ ಕನ್ನಡದಲ್ಲಿ ಎದುರಾಗಿರುವ ಈ ದಿನದಲ್ಲಿ ಉತ್ತಮ ಚಿತ್ರ ಮೂಡಿ ಬರಲಿ ಎಂದು ಆಶಿಸೋಣ.