ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 49ನೇ ಹುಟ್ಟುಹಬ್ಬದ ಸಂಭ್ರಮದೊಂದಿಗೆ ಸೆಟ್ಟೇರಿದ 100ನೇ ಚಿತ್ರ ಜೋಗಯ್ಯ ಚಿತ್ರದ ಅದ್ದೂರಿ ಸಮಾರಂಭ ಹಲವು ಅವ್ಯವಸ್ಥೆಗಳ ಆಗರವಾಗಿ ಹೋಯಿತು. ಭಾರೀ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಒಂದು ಹಂತದಲ್ಲಿ ಕಿಕ್ಕಿರಿದ ಅಭಿಮಾನಿಗಳಿಂದ ಬಚಾವ್ ಮಾಡಲು ಚಿರಂಜೀವಿ ಅವರನ್ನು ಪೊಲೀಸ್ ಜೀಪಿನಲ್ಲೇ ಕರೆದೊಯ್ಯಲಾಯಿತು. ಇಷ್ಟೆಲ್ಲಾ ನಡೆದಾಗ, ಕರ್ತವ್ಯ ನಿರತ ಪೊಲೀಸರೊಬ್ಬರ ಮೇಲೆ ಅಭಿಮಾನಿಯೋರ್ವ ಪೊಲೀಸರೊಂದಿಗೆ ಜಗಳವಾಡಿ ಇನ್ನೇನು ಕೇಸು ಜಡಿಯಬೇಕಾಗುತ್ತದೆ ಎನ್ನುವ ಹಂತಕ್ಕೆ ತಲುಪಿದಾಗ ಸ್ವತಃ ಶಿವರಾಜ್ ಕುಮಾರ್ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ ಅಭಿಮಾನಿಗೆ ನೆರವಾದರು. ಇವೆಲ್ಲ ತೆಲುಗು ಸ್ಟಾರ್ ಚಿರಂಜೀವಿ, ತಮಿಳು ಸ್ಟಾರ್‌ಗಳಾದ ಸೂರ್ಯ, ವಿಜಯ್ ಇವರೆಲ್ಲರ ಸಮ್ಮುಖದಲ್ಲೇ ನಡೆದುಹೋಯಿತು.
ಹೌದು. ಕಂಠೀರವ ಸ್ಟೇಡಿಯಂ ಶಿವಣ್ಣ ಅವರ ಹುಟ್ಟುಹಬ್ಬದ ದಿನ ಕಿಕ್ಕಿರಿದು ತುಂಬಿತ್ತು. ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಷ್ಟು ಅದ್ದೂರಿಯಾಗಿ ಜೋಗಯ್ಯ ಚಿತ್ರದ ಮುಹೂರ್ತ ಮಾಡುತ್ತೇನೆ ಎಂದಿದ್ದ ಪ್ರೇಮ್ ಅಕ್ಷರಶಃ ಅಷ್ಟು ಅದ್ದೂರಿಯಾಗಿಯೇ ಸಮಾರಂಭ ಹಮ್ಮಿಕೊಂಡಿದ್ದರು. ಆದರೆ ವ್ಯವಸ್ಥೆಯ ಅಚ್ಚುಕಟ್ಟುತನ ಇದ್ದರೂ, ನಿರೀಕ್ಷೆಗೂ ಮೀರಿದ ಜನರ ಆಗಮನ ಎಲ್ಲ ಅವ್ಯವಸ್ಥೆಯಾಗಿಸಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಟ್ಟರು. ಒಂದು ಹಂತದಲ್ಲಿ ಲಘು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು.
PR
ಅಷ್ಟರಲ್ಲಿ ಸಮಾರಂಭ ನಡೆಯುತ್ತಿದ್ದಾಗಲೇ ತಮ್ಮ ನೆಚ್ಚಿನ ನಾಯಕನನ್ನು ಮುಟ್ಟಲು ಅಭಿಮಾನಿಯೋರ್ವರು ಪ್ರಯತ್ನಿಸಿದಾಗ ಪೊಲೀಸರು ಆತನನ್ನು ತಡೆದರು. ಶಿವಣ್ಣ ಅವರನ್ನು ತಲುಪದಂತೆ ತಡೆದರು. ನಾಯಕನನ್ನು ತಲುಪಲು ಅಡ್ಡಿಪಡಿಸಿದ ಪೊಲೀಸರ ಮೇಲೆ ಆ ಅಭಿಮಾನಿ ಸಿಕ್ಕಾಪಟ್ಟೆ ವಾಗ್ದಾಳಿ ನಡೆಸಿದ. ಮಾತಿಗೆ ಮಾತು ಬೆಳೆಸಿದ. ಇದೇ ಸಂದರ್ಭ ಕರ್ತವ್ಯ ನಿರತ ಪೊಲೀಸರ ಮೇಲೆ ಹೀಗೆ ಜಗಳವಾಡಿದರೆ ಆಗುವ ಸಾಮಾನ್ಯ ಮನುಷ್ಯನ ಪರಿಸ್ಥಿತಿಯೇ ಆತನದೂ ಆಯಿತು. ಇನ್ನೇನು ಪೊಲೀಸ್ ಠಾಣೆ ಕರೆದೊಯ್ಯಬೇಕು ಎಂಬಷ್ಟರಲ್ಲಿ ಈ ಪ್ರಕರಣ ಸ್ವತಃ ಶಿವರಾಜ್ ಕುಮಾರ್ ಗಮನ ಸೆಳೆಯಿತು. ಸ್ವತಃ ಶಿವಣ್ಣ ಅವರೇ ವೇದಿಕೆಯಿಂದ ಬಂದು ಪೊಲೀಸರಲ್ಲಿ ವಿನಂತಿಸಿ, ಕೇಸು ಹಾಕಬೇಡಿ ಎಂದರು. ಶಿವಣ್ಣ ಅವರ ಮಾತಿನಿಂದಾಗಿ ಅಭಿಮಾನಿ ಪೊಲೀಸ್ ಠಾಣೆ ಹತ್ತುವುದು ತಪ್ಪಿತು.
ಚಿರಂಜೀವಿ ಕ್ಲಾಪ್ ಮಾಡಿದ ಈ ಸಮಾರಂಭದಲ್ಲಿ ಶಿವಣ್ಣ ಐತಿಹಾಸಿ ವೇಷ ಧರಿಸಿ ಜೋಗಿಯಂತೆ ಕೂದಲು ಬಿಚ್ಚಿ ಭಂ ಭಂ ಭೋಲೇನಾಥ್... ಹಾಡಿಗೆ ಹೆಜ್ಜೆ ಹಾಕಿದರು. ಅವರ ಹಿಂದೆ ಅಘೋರಿಗಳ ಗೆಟಪ್ಪಿನಲ್ಲಿ ನೂರಾರು ಜನರು ಹೆಜ್ಜೆ ಹಾಕಿದರು. ಡೊಳ್ಳು ಕುಣಿತವೂ ನಡೆಯಿತು. ಇವೆಲ್ಲವುಗಳ ಚಿತ್ರೀಕರಣವೂ ನಡೆಯಿತು. ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಮಗ ಶಿವಣ್ಣರನ್ನು ವೇದಿಕೆಯಲ್ಲೇ ಅಪ್ಪಿ ಮುತ್ತುಕೊಟ್ಟು ದೃಷ್ಟಿ ತೆಗೆದುದು ಗಮನಾರ್ಹವಾಗಿತ್ತು. ತಮಿಳು ನಟರಾದ ವಿಜಯ್, ಸೂರ್ಯ ಅವರನ್ನು ನೋಡಲೂ ಕೂಡಾ ಅವರ ಅಭಿಮಾನಿ ವರ್ಗದ ನೂಕು ನುಗ್ಗಲನ್ನು ಪೊಲೀಸರು ಹರ ಸಾಹಸ ಪಟ್ಟು ನಿಯಂತ್ರಿಸಿದರೆ ಮತ್ತೊಂದೆಡೆ ಇವೆಲ್ಲವುಗಳ ನಡುವೆಯೇ ಪೊಲೀಸರೂ ಕೂಡಾ ತಮ್ಮ ನೆಚ್ಚಿನ ಸ್ಟಾರ್‌ಗಳ ಫೋಟೋಗಳನ್ನು ತಮ್ಮ ಮೊಬೈಲುಗಳಲ್ಲಿ ಸೆರೆಹಿಡಿದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು.
ಮೆಗಾ ಸ್ಟಾರ್ ಚಿರಂಜೀವಿ ಶಿವಣ್ಣರನ್ನು ಕೊಂಡಾಡಿದರು. ಅಪ್ಪ ರಾಜಣ್ಣನ ಹೆಸರನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವ ನಟ ಎಂದು ಹೊಗಳಿದರು. ತಮಿಳು ನಟರಾದ ಸೂರ್ಯ, ವಿಜಯ್ ಕೂಡಾ ಶಿವಣ್ಣರಿಗೆ ಶುಭ ಹಾರೈಸಿದರು. ಒಟ್ಟಾರೆ ಈ ಸಮಾರಂಭ ಹಲವು ಲೋಪದೋಷಗಳ ನಡುವೆಯೂ ಅದ್ದೂರಿಯಾಗಿಯೇ ನಡೆಯಿತು ಎಂದರೆ ತಪ್ಪಿಲ್ಲ.