ಇಂದು ಗ್ರಾಮೀಣ ಸೊಗಡಿನ ಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಮಾತು ಮಾತಿಗೂ ನಗಿಸುವ ಸಾಮರ್ಥ್ಯ ಇರುವ ಗ್ರಾಮ್ಯ ಭಾಷೆಯ ಜೋಕುಗಳಿಗೆ ಈಗ ಸಕತ್ ಬೇಡಿಕೆ. ಹೆಜ್ಜೆ ಹೆಜ್ಜೆಗೂ ಉಲ್ಲಾಸ ನೀಡುವ ಚಿತ್ರ ಪ್ರೇಮಕಥೆಯಾಗಿದ್ದರಂತೂ ಮುಗಿದೇ ಹೋಯಿತು. ಡೈಲಾಗುಗಳ ಸುರಿಮಳೆಯೇ ಆಗುತ್ತದೆ. ಇಂಥದ್ದೇ ಒಂದು ಚಿತ್ರಗಳ ಪಟ್ಟಿಗೆ ಸೇರುತ್ತದೆ ಪ್ರಶಾಂತ್ ಮಾಂಬಳ್ಳಿ ನಿರ್ದೇಶನದ ಕ್ರೇಜಿ ಕೃಷ್ಣ. ಹಾಸ್ಯ ಚಿತ್ರ ಅನ್ನುವುದು ಗೊತ್ತಾಗಿದೆ. ಆದರೆ ಕನ್ನಡದಲ್ಲಿ ಇತ್ತೀಚೆಗೆ ಸಾಕಷ್ಟು ಹಾಸ್ಯ ಚಿತ್ರಗಳು ಬರುತ್ತಿದ್ದು, ಇದೊಂದು ಥರಾ ಭಿನ್ನ ಅನ್ನುತ್ತಾರೆ ಮಾಂಬಳ್ಳಿ.
ಚಿತ್ರದ ಒನ್ ಲೈನ್ ಕಥೆ ಏನೆಂದರೆ, ತಂದೆ ಮಾಡಿದ ತಪ್ಪೊಂದು ಮಗನ ಮೇಲೆ ಬರುತ್ತದೆ. ಅದರಿಂದ ಆತ ಹೇಗೆ ಪಾರಾಗಿ ಬರುತ್ತಾನೆ ಅನ್ನುವುದೇ ಸ್ಟೋರಿ. ಇಲ್ಲಿ ನಾಯಕನ ಹೆಸರು ಕೃಷ್ಣ ಆದರೂ, ಹುಡುಗಿಯರಿಗಿಂತ ಕಷ್ಟಗಳೇ ಇವನನ್ನು ಹೆಚ್ಚಾಗಿ ಕಾಡುತ್ತದೆ.
ಚಿತ್ರದ ನಿರ್ಮಾಪಕ ಪ್ರವೀಣ್ ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿ. ಕೇರಳದ ನಿವಾಸಿ. ಕನ್ನಡ ಗೊತ್ತಿಲ್ಲದಿದ್ದರೂ, ಭಾಷೆಯ ಮೇಲಿನ ಅಭಿಮಾನಕ್ಕೆ ಹಣ ಹೂಡುತ್ತಿದ್ದಾರೆ. ಚಿತ್ರದ ನಾಯಕಿ ಸುರಭಿ ಕೂಡಾ ಮಲಯಾಳಿ ಕುಟ್ಟಿಯೇ! ಇದೀಗ ತಾನೆ ಪಿಯುಸಿ ಮುಗಿಸಿರುವ ಈಕೆ ಭರತನಾಟ್ಯ ಕಲಿತಿದ್ದಾಳೆ. ಇದನ್ನು ಬಿಟ್ಟರೆ ಆಕೆಗೆ ಬೇರೇನೂ ಬರದು.
ನಾಯಕ ಕಿಶನ್ ಸಹ ಮೊದಲ ಬಾರಿಗೆ ಕ್ಯಾಮರಾ ಮುಂದೆ ನಿಲ್ಲುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಒಂದಿಷ್ಟು ಹೆಸರು ಮಾಡಿರುವ ಈ ಯುವಕ, ಚಿತ್ರ ಬದುಕಿನಲ್ಲಿ ತಮ್ಮ ಸತ್ವ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಇದರಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅನ್ನುತ್ತಾರೆ.