ಅಂಡರ್ ವರ್ಲ್ಡ್ ಬದುಕಿನ ಯಾವುದೇ ಚಿತ್ರದ ಎರಡನೇ ಭಾಗ ಇದುವರೆಗೂ ಬಂದದ್ದು ಇಲ್ಲ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದು ಹೋಗಿವೆ. ಆದರೆ ಎರಡನೇ ಭಾಗವಾಗಿ ಬಿಡುಗಡೆ ಭಾಗ್ಯ ಕಾಣುತ್ತಿರುವುದು ಡೆಡ್ಲಿ ಸೋಮ -2 ಮಾತ್ರ. ಇಂತಹ ಚಿತ್ರ ಇದೀಗ ದಕ್ಷಿಣ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದೆ.
ಸೂಪರ್ ಫಾಸ್ಟ್ ನಿರೂಪಣೆಯಿರುವ ಚಿತ್ರ ಎಂಬ ಹೆಗ್ಗೆಳಿಗೆ ಬಿಡುಗಡೆಯಾಗುವ ಮೊದಲೇ ಡೆಡ್ಲಿ ಸೋಮ 2 ಚಿತ್ರ ಪಾತ್ರವಾಗಿದೆ. ಕಾರಣ ಈ ಚಿತ್ರದಲ್ಲಿ 131 ಸೀನ್‌ಗಳಿವೆ. ಸಾಮಾನ್ಯವಾಗಿ ಚಿತ್ರಗಳಲ್ಲಿ 70ರಿಂದ 80 ಸೀನ್‌ಗಳಿರುತ್ತವೆ. ಈ ಹಿಂದೆ ವಿಶನ್ ಇಸ್ತಾನ್‌ಬುಲ್ ಎಂಬ ಹಿಂದಿ ಚಿತ್ರದಲ್ಲಿ 148 ಸೀನ್‌ಗಳಿದ್ದು, ಅದು ಭಾರತದ ಚಿತ್ರರಂಗದಲ್ಲೇ ದಾಖಲೆ ಬರೆದಿತ್ತು. ಇದೀಗ ಅದದ ನಂತರ ಇಡೀ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸೀನ್‌ಗಳನ್ನು ಹೊಂದಿರುವ ಚಿತ್ರ ಎಂಬ ಹೆಗ್ಗೆಳಿಕೆಗೆ ಡೆಡ್ಲಿ ಸೋಮ 2 ಚಿತ್ರ ಪಾತ್ರವಾಗಿದೆ.
ಹೌದು. ರವಿ ಶ್ರೀವತ್ಸ ಕೊನೆಗೂ ತಮ್ಮ ಸಾಹಸವನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಭಾಗ ಕಂಡದ್ದಕ್ಕಿಂತ ದೊಡ್ಡ ಹಾಗೂ ಹೆಚ್ಚಿನ ಯಶಸ್ಸನ್ನು ಈ ಚಿತ್ರ ಕಾಣಲಿದೆ ಎನ್ನುವ ಮಾತನ್ನೂ ಅವರು ಆಡಿದ್ದಾರೆ.
ಚಿತ್ರದ ಚಿತ್ರೀಕರಣ ಯಾವುದೇ ಅಡೆತಡೆ ಇಲ್ಲದೇ ಮುಗಿದದ್ದು ಅವರಿಗೆ ಅಪಾರ ಸಂತಸ ತಂದಿದೆ. 15 ವರ್ಷದ ಅವರ ಅನುಭವದಲ್ಲಿ ಇದೇ ದೊಡ್ಡ ರಿಸ್ಕ್ ತೆಗೆದುಕೊಂಡು ಮಾಡಿದ ಚಿತ್ರವಂತೆ. ಪ್ರೇಕ್ಷಕರಿಗೆ ಯಾವುದೇ ಗೊಂದಲ ಆಗದ ರೀತಿ ಚಿತ್ರ ಸಿದ್ಧಪಡಿಸಿದ್ದೇನೆ ಎನ್ನುತ್ತಾರೆ.
ಚಿತ್ರದಲ್ಲಿ ಭಾವುಕತೆ, ಸೆಂಟಿಮೆಂಟ್, ಆಕ್ಷನ್, ಲವ್ ಸೇರಿದಂತೆ ಹಲವು ವಿಷಯಗಳಿಗೆ ಸಾಕಷ್ಟು ಪ್ರಾಧಾನ್ಯ ಇದೆಯಂತೆ. ವಿಶೇಷ ಅಂದರೆ ಅಂಡರ್ ವರ್ಲ್ಡ್ ಕಥೆ ಆದರೂ ಇಲ್ಲಿ ಹೊಡೆದಾಟಕ್ಕೆ ಹೆಚ್ಚು ಅವಕಾಶ ಇಲ್ಲವಂತೆ. ಚಿತ್ರದ ಇನ್ನೊಂದು ವಿಶೇಷ ಅಂದರೆ ಇಲ್ಲಿ ಮಚ್ಚು ಝಳಪಿಸುವುದಿಲ್ಲವಂತೆ. ಅದ್ಯಾವ ಮಾದರಿಯ ಭೂಗತ ಜಗತ್ತಿನ ಚಿತ್ರವೋ ಬಿಡುಗಡೆ ಆದ ಮೇಲೆಯೇ ನೋಡಬೇಕು.