ಕೃಷ್ಣನ್ ಲವ್ ಸ್ಟೋರಿಯ ಗೆಲುವಿನ ನಂತರ ನಮ್ಮ ಶಶಾಂಕ್ ಅಸಲಿ ಸತ್ಯವನ್ನು ಹೊರಗೆಡವಿದ್ದಾರೆ. ಚಿತ್ರದ ರಿಯಲ್ ನಾಯಕನ ಹೆಸರು ಬಿಡುಗಡೆ ಮಾಡಿದ್ದಾರೆ. ಆತ ಇವರ ಆತ್ಮೀಯ ಸ್ನೇಹಿತ ಹರ್ಷ ಅಂತೆ. ಇವರೂ ಸಹ ಚಿತ್ರ ಬದುಕಿನಲ್ಲೇ ನೆಲೆ ಕಂಡುಕೊಂಡಿದ್ದಾರೆ. ಶಶಾಂಕ್ ಜತೆಯಾಗಿಯೇ ಇದ್ದಾರೆ.
ಕೃಷ್ಣನ್ ಲವ್ ಸ್ಟೋರಿ ಚಿತ್ರ ನಿಜ ಜೀವನದ ಕಥೆಯೇ ಆಗಿದೆ. ಆದರೆ ಶೇ.25ರಷ್ಟು ಸಿನಿಮಾಕ್ಕಾಗಿ ಮಸಾಲೆ ಸೇರಿಸಲಾಗಿದೆ. ಶೀಘ್ರದಲ್ಲೇ ಈ ಕಥೆ ಯಾರ ನಿಜ ಜೀವನದಲ್ಲಿ ನಡೆದಿತ್ತು ಎಂದು ಹೇಳುತ್ತೇನೆ ಎಂದು ನಿರ್ದೇಶಕ ಶಶಾಂಕ್ ಹೇಳಿದ್ದರು. ಅದರಂತೆಯೇ ಇದೀಗ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಈ ಚಿತ್ರದ ರೀಲ್ ಹೀರೋ ಅಜಯ್ ಆಗಿದ್ದು, ಇವರಿಗೂ ಈವರೆಗೆ ಅಸಲಿ ಹೀರೋ ಯಾರು ಎನ್ನುವುದು ಗೊತ್ತಿರಲಿಲ್ಲವಂತೆ. ಇದುವರೆಗೂ ಸಸ್ಪೆನ್ಸ್ ಆಗಿ ಇಟ್ಟಿದ್ದ ಸತ್ಯವನ್ನು ಶಶಾಂಕ್ ಈಗಷ್ಟೇ ಹೊರಗೆಡವಿದ್ದಾರೆ. ಈ ನಡುವೆ ರೀಲ್ ಹೀರೋ ಅಜಯ್‌ಗೆ ನ್ಯಾಯ ಒದಗಿಸುವಂತೆ ಅಭಿಮಾನಿಗಳು ಕೋರಿಕೊಂಡಿದ್ದರಿಂದ ಭಾಗ ಎರಡನ್ನು ಮಾಡಲು ಹೊರಟಿರುವ ಶಶಾಂಕ್ ಅದ್ಯಾವ ರೀತಿ ರಿಯಲ್ ಹೀರೋ ಹರ್ಷ ಅವರಿಗೆ ನ್ಯಾಯ ಒದಗಿಸುತ್ತಾರೋ ಗೊತ್ತಿಲ್ಲ.
ಹರ್ಷ ಮಾತಿಗೆ ಸಿಕ್ಕಾಗ ಹೇಳಿದ್ದು ಇಷ್ಟು. ಚಿತ್ರರಂಗದಲ್ಲೇ ನನ್ನ ಜೀವನ ಕಥೆ ಇತಿಹಾಸವಾಯಿತು. ಇದು ನನ್ನ ಕಥೆ ಅಷ್ಟೆ. ಚಿತ್ರವಾಗುತ್ತೆ ಅನ್ನುವುದು ಗೊತ್ತಿರಲಿಲ್ಲ. ಶಶಾಂಕ್ ನನಗೆ ಸಪ್ರೈಸ್ ಕೊಟ್ಟಿದ್ದಾರೆ. ಅಸಲಿ ಜೀವನದಲ್ಲಿ ನಾಯಕಿ ಸತ್ತಿಲ್ಲ. ಅವಳಿಗೆ ಬೇರೊಬ್ಬನ ಜತೆ ಮದುವೆ ಆಗಿ, ಮಗುವೂ ಇದೆ. ನನ್ನ ಪ್ರೀತಿ ಮಾತ್ರ ಸತ್ತಿದೆ ಅಷ್ಟೆ ಎನ್ನುತ್ತಾರೆ.
ನನಗೆ ಅವಳನ್ನು ಸಂಪೂರ್ಣವಾಗಿ ಮರೆಯಲು ಸಾಧ್ಯವಿಲ್ಲ. ಅವಳು ಎಲ್ಲೇ ಇರಲಿ ಚೆನ್ನಾಗಿರಲಿ. ಅವಳು ನನಗೆ ಮೋಸ ಮಾಡಿದಳು ಅನ್ನುವುದಕ್ಕಿಂತ ವಿಧಿ ನನಗೆ ಮೋಸ ಮಾಡಿತು ಅನ್ನಿಸುತ್ತೆ. ಯಾರ ಮೇಲೆ ಏನು ಹೇಳಿ ಪ್ರಯೋಜನ ಇಲ್ಲ ಎನ್ನುತ್ತಾರೆ. ಹೊರನಾಡಿನಿಂದ ಬರುವಾಗ ಹರ್ಷ ತನ್ನ ಕಥೆ ಹೇಳಿಕೊಂಡಿದ್ದ. ಅದಕ್ಕೆ ಸಿನಿಮಾ ಕ್ವಾಲಿಟಿ ಇದೆ ಅನ್ನಿಸ್ತು. ಮಾಡಿ ಮುಗಿಸಿದೆ. ಜನ ಒಪ್ಪಿಕೊಂಡಿದ್ದಾರೆ. ಅದರ ಮುಂದುವರಿದ ಭಾಗಕ್ಕೆ ಸಿದ್ಧತೆ ನಡೆಸುತ್ತಿದ್ದೇನೆ ಎನ್ನುತ್ತಾರೆ ಶಶಾಂಕ್.