ಆರ್ಥಿಕ ಮುಗ್ಗಟ್ಟು?: ನಟ ಇಂದೂಧರ್ ದಂಪತಿ ಆತ್ಮಹತ್ಯೆ

ಬುಧವಾರ, 14 ಜುಲೈ 2010( 19:21 IST )
ಕನ್ನಡ ಚಿತ್ರ ನಟ ಹಾಗೂ ಕಿರುತೆರೆ ನಟ ಇಂದೂಧರ್ (42) ಹಾಗೂ ಅವರ ಪತ್ನಿ ಹೇಮಾ ಇಂಧೂದರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ (ಜು.14) ಮಧ್ಯಾಹ್ನ ಅವರ ಮೃತದೇಹ ಜಯನಗರದ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಇಂದೂಧರ್ ಶ್ರುತಿ, ಅಣ್ಣಯ್ಯ, ನಿಷ್ಕರ್ಷ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದು, ಕುಂಕುಮ ಭಾಗ್ಯ, ಸವ್ಯಸಾಚಿ, ಮಹಾಯಜ್ಞ ಮತ್ತಿತರ ಧಾರಾವಾಹಿಗಳಲ್ಲಿ ನಟಿಸಿದ್ದರು.
ನಟ ಇಂದೂಧರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಹೇಮಾ ಶವ ಬೆಡ್ ರೂಂನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದೂಧರ್ ಮೊದಲು ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ನಂತರ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ. ಆದರೆ ತನಿಖೆಗಳಿಂದ ಇನ್ನಷ್ಟೇ ಸತ್ಯ ಬಹಿರಂಗವಾಗಬೇಕಿದೆ.
ಆರ್ಥಿಕ ದುಸ್ಥಿತಿಯೇ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಒಂದೆಡೆ ಸಾಲ ಹೆಚ್ಚುತ್ತಿದ್ದು, ಇನ್ನೊಂದೆಡೆ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗಿರುವುದರಿಂದ ಆರ್ಥಿಕ ಮುಗ್ಗಟ್ಟು ಈ ದಂಪತಿಗಳನ್ನು ಆತ್ಮಹತ್ಯೆಗೆ ಪ್ರೇರೇಪಿಸಿವೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆದರೆ ಇನ್ನೂ ನಿಖರ ಕಾರಣಗಳು ತಿಳಿದು ಬಂದಿಲ್ಲ.
ನಾಲ್ಕು ಪ್ರತ್ಯೇಕ ಡೆತ್ ನೋಟ್: ಇಂಧೂದರ್ ಅವರು ಬರೆದಿಟ್ಟಿರುವ ಪತ್ರದಲ್ಲಿಯೂ, ತುಂಬಾ ಜನರಿಗೆ ನಾನು ಋಣಿಯಾಗಿದ್ದೆ. ಜೀವನದಲ್ಲಿ ಅಂದುಕೊಂಡ ಗುರಿಯನ್ನು ನಮಗೆ ತಲುಪಲು ಸಾಧ್ಯವಾಗಲಿಲ್ಲ. ಹೀಗಾಗಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ. ನಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿರುವುದಾಗಿ ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಕೃಷ್ಣ ಭಟ್ ತಿಳಿಸಿದ್ದಾರೆ. ಆತ್ಮಹತ್ಯೆಗೂ ಮೊದಲು ಇಂದೂಧರ್ ನಾಲ್ಕು ಪ್ರತ್ಯೇಕ ಪತ್ರಗಳನ್ನು ಬರೆದಿಟ್ಟಿದ್ದು, ಹೇಮಾ ಅವರ ಹೆತ್ತವರಿಗೆ, ನಿರ್ಮಾಪಕ ಕೃಷ್ಣಮೂರ್ತಿ ಅವರಿಗೆ ಪ್ರತ್ಯೇಕವಾಗಿ ಪತ್ರಗಳಿವೆ. ಜೊತೆಗೆ ತಾನು ಯಾರಿಗೂ ಸಾಲ ಹಿಂತಿರುಗಿಸಬೇಕಿಲ್ಲ. ಆದರೆ ಕೆಲವರಿಗೆ ಚೆಕ್ ನೀಡಿದ್ದೇನೆ. ಅವರು ಈ ಚೆಕ್‌ಗಳನ್ನು ನನ್ನ ಸಹೋದರನಿಗೆ ಹಿಂತಿರುಗಿಸಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ ಎನ್ನಲಾಗಿದೆ. ಹೀಗಾಗಿ ಸಾಲಬಾಧೆಯೇ ಆತ್ಮಹತ್ಯೆಗೆ ಕಾರಣ ಎಂಬ ವಿಚಾರವನ್ನು ನಿಖರವಾಗಿ ಹೇಳಲಾಗುತ್ತಿಲ್ಲ.
ಇಂದೂಧರ್ ಸ್ನೇಹಪರ ವ್ಯಕ್ತಿಯಾಗಿದ್ದು, ಸಭ್ಯ, ಸೌಮ್ಯ ಸ್ವಭಾವದವರು. ಎಂದಿಗೂ ಯಾರ ಜೊತೆಯೂ ತನ್ನ ತೊಂದರೆಗಳನ್ನು, ಸಮಸ್ಯೆಗಳನ್ನು ಹಂಚಕೊಂಡವರಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಇದ್ದವರು ಎಂದು ಚಿತ್ರರಂಗದ ಗಣ್ಯರು ಹೇಳುತ್ತಾರೆ. ಇಂದೂಧರ್ ಪತ್ನಿ ಹೇಮಾ ಕೂಡಾ ಚಿತ್ರರಂಗದಲ್ಲೇ ಕೆಲಸ ಮಾಡುತ್ತಿದ್ದು, ಹಲವಾರು ಚಿತ್ರಗಳಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರು. ಪತಿ ಹಾಗೂ ಪತ್ನಿ ಇಬ್ಬರೂ ಚಿತ್ರರಂಗದಲ್ಲಿ ಸಾಕಷ್ಟು ಕನಸು ಕಂಡಿದ್ದು, ಇಬ್ಬರೂ ಸೇರಿ ಚಿತ್ರ ನಿರ್ಮಿಸುವ ಕಾರ್ಯ ಕೈಗೆತ್ತಿಕೊಂಡಿದ್ದರು ಎನ್ನಲಾಗಿದೆ.
ಚಿತ್ರರಂಗಕ್ಕೆ ಆಘಾತ: ದಂಪತಿಯ ಆತ್ಮಹತ್ಯೆ ಪ್ರಕರಣ ಚಿತ್ರರಂಗಕ್ಕೆ ಆಘಾತ ತಂದಿದೆ. ನಟನಟಿಯರಾದ ಶಿವಧ್ವಜ್, ಶ್ರುತಿ, ತಾರಾ, ಜಗ್ಗೇಶ್, ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ನವೀನ್ ಕೃಷ್ಣ, ಅಭಿನಯ, ಹೊನ್ನವಳ್ಳಿ ಕೃಷ್ಣ ಮತ್ತಿತರು ಆಘಾತ ವ್ಯಕ್ತಪಡಿಸಿದ್ದಾರೆ. ಇದೊಂದು ಚಿತ್ರರಂಗಕ್ಕೆ ದೊಡ್ಡ ಶಾಕ್ ಎಂದಿದ್ದಾರೆ.
ನನಗೆ ಇದು ದೊಡ್ಡ ಶಾಕ್. ನನ್ನ ಮೊದಲ ಶ್ರುತಿ ಚಿತ್ರದಲ್ಲಿ ಅವರೂ ನಟಿಸಿದ್ದರು. ನನ್ನ ಚಿತ್ರರಂಗದ ಬೆಳವಣಿಗೆ ನೋಡಿ ತುಂಬ ಖುಷಿ ಪಡ್ತಿದ್ದರು. ತುಂಬ ಸೌಮ್ಯ ಸ್ವಭಾವದ ವ್ಯಕ್ತಿ. ಈ ದಂಪತಿ ಇತ್ತೀಚೆಗಷ್ಟೆ ಒಂದು ಕಥೆ ರೆಡಿ ಮಾಡಿದೀವಿ ಅಂತಿದ್ದರು. ಆದರೆ ಒಮ್ಮೆಯೂ ಕಷ್ಟ ಹಂಚಿಕೊಂಡಿರಲಿಲ್ಲ ಎಂದರು ನಟಿ ಶ್ರುತಿ.
ಅಭಿನೇತ್ರಿ ತಾರಾ ಮಾತನಾಡುತ್ತಾ, ಇದು ನನಗೆ ದೊಡ್ಡ ಶಾಕ್ ನ್ಯೂಸ್. ನನ್ನ ಹೆಂಡತಿಗೆ ನಿರ್ದೇಶನ ಮಾಡೋ ಕನಸಿದೆ. ನಾನೇ ನಿರ್ಮಾಣ ಮಾಡ್ತೀನಿ ಅಂತ ಇತ್ತೀಚೆಗೆ ಅಂದಿದ್ದು. ಅವರು ಈ ಆತ್ಮಹತ್ಯೆಯ ತಪ್ಪು ಯಾಕೆ ಮಾಡಿದ್ರು ಅಂತಾನೇ ಅರ್ಥವಾಗ್ತಿಲ್ಲ. ತುಂಬ ಒಳ್ಳೆ ವ್ಯಕ್ತಿಗಳವರು. ಆದರೆ ನನಗೆ ಅವರ ವೈಯಕ್ತಿಕ ಬದುಕು ನನಗೆ ಗೊತ್ತಿರಲಿಲ್ಲ. ಹೀಗಾಗಬಾರದಿತ್ತು ಎಂದರು.
ಹಿರಿಯ ನಟಿ ಗಿರಿಜಾ ಲೋಕೇಶ್ ಮಾತನಾಡುತ್ತಾ, ತುಂಬಾ ಬೇಜಾರಾಗ್ತಿದೆ ಈ ವಿಚಾರ ಕೇಳಿ. ಹೇಮಾ ತುಂಬ ಸುಂದರವಾದ ಕನಸು ಕಟ್ಟಿದ್ದಳು. ಸಾಯೋವಂಥ ಕಷ್ಟ ಅವರಿಗೇನೂ ಇರಲಿಲ್ಲ. ಬಹುಶಃ ತಾವಂದುಕೊಂಡ ಮಾದರಿಯ ಕನಸನ್ನು ನನಸು ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗದಿರಬಹುದು. ಹೇಮಾಗೆ ತುಂಬ ಉತ್ತಮವಾದ ಜೀವನ ನಡೆಸುವ ಕನಸಿತ್ತು. ಬಹುಶಃ ಪತಿಗೆ ಇದನ್ನು ಪೂರೈಸಲು ಸಾಧ್ಯವಾಗಲಿಲ್ಲವೋ ಗೊತ್ತಿಲ್ಲ. ಆದರೆ ಅವರಿಬ್ಬರೂ ಚೊಕ್ಕವಾಗಿ ಸಂಸಾರ ನಡೆಸುತ್ತಿದ್ದರು. ನಿನ್ನೆಯಲ್ಲ ಮೊನ್ನೆಯಷ್ಟೆ ಧಾರಾವಾಹಿ ವಿಚಾರ ಮಾತಾಡಲು ಅವರು ಫೋನ್ ಮಾಡಿದ್ರು ನನಗೆ. ಈ ಘಟನೆ ಅರಗಿಸಿಕೊಳ್ಳೋದಕ್ಕೇ ಸಾಧ್ಯವಾಗ್ತಾ ಇಲ್ಲ ಎಂದು ಕಣ್ಣಂಚಿನಲಿ ನೀರು ತುಂಬಿ ಗದ್ಗದಿತರಾದರು ಗಿರಿಜಾ.
ನಟ ನವೀನ್ ಕೃಷ್ಣ ಮಾತನಾಡುತ್ತಾ, ಇಂದೂಧರ್ ಕಳೆದ ವರ್ಷ ನನ್ನನ್ನು ಹೀರೋ ಆಗಿ ಮಾಡಿ ಚಿತ್ರ ಮಾಡುವ ಬಗ್ಗೆ ನನ್ನ ಜೊತೆ ಮಾತಾಡಿದ್ದರು. ಅದು ಕಳೆದ ವರ್ಷ ಜುಲೈನಲ್ಲಿ ಸೆಟ್ಟೇರಬೇಕಿತ್ತು. ಆದರೆ ಆಗ ನಿರ್ಮಾಪಕರ ಸಮಸ್ಯೆಯಿಂದಾಗಿ ಆಗಲಿಲ್ಲ. ನಂತರ ಅದೇನಾಯ್ತೋ ಗೊತ್ತಾಗಲಿಲ್ಲ. ನನ್ನ ಧಿಮಾಕು ಚಿತ್ರ ಸೋತಾಗ ತುಂಬ ಮಾನಸಿಕವಾಗಿ ಬೆಂಬಲ ನೀಡಿದ್ದರು ಅವರು. ಆದರೆ ನನಗವರ ಸಾಲದ ಬಗ್ಗೆ ಗೊತ್ತಿಲ್ಲ ಎಂದರು.
ಕಿರುತೆರೆ ನಟಿ ಅಭಿನಯ ಮಾತನಾಡುತ್ತಾ, ಹೇಮಾ ನನ್ನ ಉತ್ತಮ ಗೆಳತಿ. ಹೆಚ್ಚಾಗಿ ಭೇಟಿಯಾಗ್ತಾ ಇದ್ದೆವು. ಆದರೆ ಇಂಥ ಘಟನೆ ನಡೆಯುತ್ತೆ ಎಂಬುದನ್ನು ನನಗೆ ಊಹಿಸಲೂ ಸಾಧ್ಯವಾಗ್ತಾ ಇಲ್ಲ ಎಂದು ಕಣ್ಣೀರಿಟ್ಟರು ಅಭಿನಯ.