ಕನ್ನಡದಲ್ಲೊಂದು ಸ್ವಮೇಕ್ ಚಿತ್ರ ಮೊನ್ನೆ ಸೆಟ್ಟೇರಿದೆ. ಹೆಸರು ಸುಬ್ರಹ್ಮಣ್ಯ. ವಿಜೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದನ್ನು ಲಲಿತಾರಾಜ್ ಹಾಗೂ ಗಿರಿಧರ್ ನಿರ್ಮಿಸುತ್ತಿದ್ದಾರೆ.
ಯುವರಾಜ್ ಹಾಗೂ ತಾವರೆ ನಾಯಕ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಲ್ಪ ಸ್ವಲ್ಪ ಫೈಟ್, ಇನ್ನೂ ಸ್ವಲ್ಪ ಲವ್, ರುಚಿಗೆ ತಕ್ಕಷ್ಟು ಸೆಂಟಿಮೆಂಟ್ ಸೇರಿಸಿ ಚಿತ್ರ ಸಿದ್ಧಪಡಿಸಲಾಗಿದೆ. ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೂ ಮಾರುವ ಹುಡುಗನ ಸುತ್ತ ಈ ಚಿತ್ರ ಸುತ್ತಲಿದೆ.
ಈ ಚಿತ್ರದಲ್ಲಿ ನಾಯಕನನ್ನು ಮೂರು ಹಂತದಲ್ಲಿ ಕಾಣಬಹುದು. ಮೊದಲ ಹಂತದಲ್ಲಿ ಹೂ ಮಾರುವ ಹುಡುಗ, ಎರಡನೇ ಹಂತದಲ್ಲಿ ವಿಲನ್ ಹಾಗೂ ಕೊನೆಯಲ್ಲಿ ಹುಚ್ಚ. ಹುಡುಗಿ ಕೈ ಕೊಟ್ಟರೆ ಹುಡುಗರು ಹುಚ್ಚರಾಗುವುದು ಸಾಮಾನ್ಯ. ಅದೇ ರೀತಿ ನಾಯಕನೂ ಹುಚ್ಚನಾಗ್ತಾನಾ? ಅಥವಾ ಕಾರಣ ಬೇರೆ ಇದೆಯಾ? ಇದನ್ನು ಚಿತ್ರ ಬಿಡುಗಡೆ ಆದ ನಂತರ ನೋಡಬೇಕು. ಉಡ ಚಿತ್ರದ ಅಭಿನಯ ಮೆಚ್ಚಿ ನಿರ್ದೇಶಕರು ಯುವರಾಜ್‌ನನ್ನು ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ.
ಎಲ್ಲರೂ ಹೇಳುವಂತೆ ಈ ಚಿತ್ರದ ನಿರ್ದೇಶಕರೂ ಕೂಜಾ, ತುಂಬಾ ಡಿಫರಂಟ್ ಕಥೆಗೆ ಹೈಟೆಕ್ ಟಚ್ ನೀಡಿದ್ದೇನೆ ಎನ್ನುತ್ತಾರೆ. ನಾಯಕಿ ತಾವರೆ ಸಹ ಈ ಚಿತ್ರವನ್ನು ತುಂಬಾ ಇಷ್ಟಪಟ್ಟು ಅಭಿನಯಿಸುತ್ತಿದ್ದಾರಂತೆ. ನಿಜಕ್ಕೂ ಒಂದು ಉತ್ತಮ ಪ್ರೇಮಕಥೆ ಇದಾಗಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.