ವಿ. ಶ್ರೀಧರ್ ನಿಮಗೆಲ್ಲಾ ಗೊತ್ತೇ ಇರಬೇಕು. ಇಲ್ಲಾ ಅಂದರೆ ಒಮ್ಮೆ ಕೃಷ್ಣನ್ ಲವ್ ಸ್ಟೋರಿ ನೆನೆಪು ಮಾಡಿಕೊಳ್ಳಿ. ಹೌದು, ಈ ಚಿತ್ರದ ಹಾಡುಗಳಿಗೆ ಜೀವ ತುಂಬಿದ ಕಲಾವಿದ ಈತ. ಚಿತ್ರ ಬಿಡುಗಡೆ ಆಗಿ ಗೆದ್ದು, ಎರಡನೇ ಭಾಗದ ನಿರ್ಮಾಣದ ಘೋಷಣೆಯೂ ಆಗಿದೆ. ಈಗಲೂ ಇವರ 'ಸಂತೆಯಲ್ಲಿ ನಿಂತರೂನು...' ಹಾಡು ಹಲವರ ಬಾಯಲ್ಲಿ ಗುನುಗಿಸಿಕೊಳ್ಳುತ್ತಿದೆ ಎಂದರೆ ಶ್ರೀಧರ್ ಕೆಲಸದ ನಿಷ್ಠೆ ಹಾಗೂ ಪರಿಶ್ರಮ ಎಷ್ಟಿದೆ ಎನ್ನುವುದು ಅರಿವಾಗುತ್ತದೆ.ಟ
ಒಂದು ಹಾಡು ಗೆದ್ದರೆ ತಕ್ಷಣ ಗದ್ದುಗೆ ಏರುವ ಸ್ಯಾಂಡಲ್ ವುಡ್ ಮಂದಿಯ ನಡುವೆ ಇವರು ತುಂಬಾ ಡಿಫರಂಟ್ ಆಗಿ ಕಂಡು ಬಂದಿದ್ದಾರೆ. ಒಂದು ಹಾಡು ಗೆದ್ದದ್ದೇ, ಜವಾಬ್ದಾರಿ ಹೆಚ್ಚಿ ಅದನ್ನು ಹೇಗೆ ನಿಭಾಯಿಸುವುದು ಎನ್ನುವುದನ್ನು ಕೇಳಿಕೊಳ್ಳಲು ತಮ್ಮ ಗುರುಗಳ ಬಳಿ ನೆರವಾಗಿ ತೆರಳಿದ್ದಾರೆ. ಅವರ ಮಾರ್ಗದರ್ಶನ ಪಡೆದು ಹಿಂತಿರುಗಿದ್ದಾರೆ!
ಸದ್ಯ ಪಿ.ಎಸ್. ಸತ್ಯ ನಿರ್ದೇಶನದ ಹೊಸ ಚಿತ್ರಕ್ಕೆ ಇವರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಮುಸ್ಸಂಜೆ ಮಾತು ಚಿತ್ರ ಗೆದ್ದ ನಂತರ ಸಾಲು ಸಾಲಾಗಿ ಎರಡು ಚಿತ್ರ ಸೋತು ಸುಣ್ಣವಾಯಿತು. ಈ ಸಂದರ್ಭದಲ್ಲಿ ಹೆಸರು ಕಳೆದುಕೊಂಡ ಇವರು ನಿಧಾನವಾಗಿ ಚೇತರಿಸಿಕೊಂಡು ಕೃಷ್ಣನ ಕೈ ಹಿಡಿದು ಗೆದ್ದರು.
ಇವರ ಸಂಗೀತ ನಿರ್ದೇಶನ ನೀಡಿದ ಇನಿಯ ಚಿತ್ರದ ಬಗ್ಗೆ ಅಪಾರ ವಿಶ್ವಾಸ ಇತ್ತಂತೆ. ಆದರೆ ಅದು ಸೋತದ್ದು ತಮಗೂ ಆಘಾತ ಹಾಗೂ ಕೆಲ ಕಾಲ ನಿರುದ್ಯೋಗವನ್ನು ತಂದಿಟ್ಟಿತು ಎನ್ನುತ್ತಾರೆ. ಸದ್ಯ ಕೃಷ್ಣನ್ ಲವ್ ಸ್ಟೋರಿ ಗೆಲುವು ಇವರಲ್ಲಿ ಅಪಾರ ಹುರುಪು ತುಂಬಿದೆ. ಮುಂದಿನ ಭವಿಷ್ಯದ ಬೆಳಕು ಕಾಣುತ್ತಿದೆ. ಅವರಿಗೆ ಯಶ ಸಿಗಲಿ.