ನಟಿ ಶುಭಾ ಪೂಂಜಾ ಈಗೇನು ಮಾಡುತ್ತಿದ್ದಾರೆ? ಸುದ್ದಿಯೇ ಇಲ್ಲದೆ ಎತ್ತ ಹೋದರು ಎಂದು ಆಶ್ಚರ್ಯ ಪಡೋದು ಬೇಡ. ಶುಭಾ ಪೂಂಜಾ ಇಲ್ಲೇ ಇದ್ದಾರೆ. ಕೆಲ ಉತ್ತಮ ಚಿತ್ರ ನೀಡಿದ್ದರೂ, ಗೆಲುವು ಅನ್ನೋ ಪ್ರಸಾದ ಇವರಿಗೆ ದೊರೆಯಲೇ ಇಲ್ಲ. ಗೆದ್ದ ಚಿತ್ರದ ಕ್ರೆಡಿಟ್ ಬೇರೆಯವರ ಪಾಲಾಗಿದೆ. ಹೀಗಾಗಿ ಈಗ ಅವರ ಅಭಿನಯದ ಮುಂದಿನ ಚಿತ್ರ ಅವರಿಗಾಗಿ ಹಿಟ್ ಆಗಬೇಕಾದ ಅನಿವಾರ್ಯ ಇದೆ.
ಸದ್ಯದ ಸ್ಥಿತಿ ನೋಡಿದಾಗ ಇವರ 'ಪ್ರೀತಿಯ ಹಂಗಾಮ' ಚಿತ್ರ ಶುಭಾ ಪೂಂಜಾರಿಗೆ ಯಶಸ್ಸು ತಂದುಕೊಡುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಚಿತ್ರದ ಹಾಡುಗಳಂತೂ ಭರ್ಜರಿಯಾಗಿ ಚಿತ್ರರಸಿಕರ ಮನಗೆದ್ದಿದೆ. ಆದರೆ ಈವರೆಗೆ ಹಲವು ಸಮಯದ ಕಾಲ ಡಬ್ಬದಲ್ಲೇ ಉಳಿದ ಈ ಚಿತ್ರ ಎಷ್ಟರ ಮಟ್ಟಿಗೆ ಸುಭಾರ ಆಸೆಗೆ ಜೀವ ನೀಡುತ್ತೋ ಗೊತ್ತಿಲ್ಲ.
ಪುಷ್ಪ ಹಾಗೂ ರಶ್ಮಿ ಏಕನಾತ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿವೇಕ್ ರಾಜ್ ನಾಯಕರಾಗಿ ಹಾಗೂ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಮೊಗ್ಗಿನ ಮನಸ್ಸು ನಂತರ ಶುಭಾ ನಟಿಸುತ್ತಿರುವ ಚಿತ್ರ ಇದಾಗಿದೆ. ಹೀಗಾಗಿ ಸಹಜವಾಗಿಯೇ ಬಹುಕಾಲದ ನಂತರ ಬಹಳ ನಿರೀಕ್ಷೆಯನ್ನೂ ಇವರು ಇರಿಸಿಕೊಂಡಿದ್ದಾರೆ.
ಮೊಗ್ಗಿನ ಮನಸ್ಸು ಚಿತ್ರದಲ್ಲಿ ಶುಭಾ ಅತ್ಯಂತ ಭಾವನಾತ್ಮಕ ಅಭಿನಯ ನೀಡಿದ್ದರು. ಈ ಚಿತ್ರದಲ್ಲೇ ಪರಿಚಯವಾಗಿದ್ದ ರಾಧಿಕಾ ಪಂಡಿತ್ ಅವಕಾಶಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾ ಮೇಲೇರುತ್ತಿದ್ದು, ಅಭಿನಯದ ಬಗ್ಗೆಯೂ ಉತ್ತಮ ಮಾತು ಕೇಳಿಬರುತ್ತಿದೆ. ಆದರೆ ಅದಾದ ನಂತರ ಶುಭಾ ಪೂಂಜಾ ಮಾತ್ರ ಖಾಲಿ ಕೂತಿದ್ದಾರೆ. ಆದರೆ ಖಾಲಿ ಕೂತ ಅಷ್ಟೂ ಸಮಯವೂ ಕೂಡಾ ಭರ್ಜರಿಯಾಗಿ ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಸುದ್ದಿ ಮಾಡಿದ್ದಾರೆ. ಇನ್ನಾದರೂ ಚಿತ್ರಗಳ ಮೂಲಕ ಸುದ್ದಿಯಾಗಲಿ. ಸಾಧನೆ ಮಾಡಲಿ ಎಂದು ಆಶಿಸೋಣ.