ಮುಖ್ಯಮಂತ್ರಿ ಯಡಿಯೂರಪ್ಪಗೂ ಯಾಕೋ ಎರಡನೇ ಮದುವೆಯತ್ತ ಕಣ್ಣು ಬಿದ್ದಿದೆ. ಅರೆ, ಯಡಿಯೂರಪ್ಪಗೆ ಎರಡನೇ ಮದುವೆನಾ? ಅದೂ ಈ ವಯಸ್ಸಲ್ಲಾ? ಅಂತೆಲ್ಲಾ ಹೌಹಾರಬೇಡಿ. ನಾವಿಲ್ಲಿ ಮಾತಾಡ್ತಿರೋದು ಪಕ್ಕಾ ಸಿನಿಮಾ ಸುದ್ದಿ. ಅರ್ಥಾತ್ ಎರಡನೇ ಮದುವೆ ಚಿತ್ರದ ಸುದ್ದಿ!
ಹೌದು. ಅದ್ಯಾಕೋ, ಅತ್ತ ಕಾಂಗ್ರೆಸ್, ಇತ್ತ ಜೆಡಿಎಸ್ ಮತ್ತೊಂದೆಡೆ ತನ್ನದೇ ಪಕ್ಷದ ಗಣಿಧಣಿಗಳ ನಡುವೆ ಸುಸ್ತಾಗಿರುವ ಯಡಿಯೂರಪ್ಪರಿಗೆ ಅದ್ಯಾಕೋ ಮನಸಾರೆ ನಗುವ ಮನಸ್ಸಾಗಿದೆಯಂತೆ. ಅದಕ್ಕಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಾ ಜನಮೆಚ್ಚಿರುವ ಎರಡನೇ ಮದುವೆ ಚಿತ್ರದತ್ತ ಕಣ್ಣು ಹಾಕಿದ್ದಾರೆ. ಹಾಗಾಗಿ ಕುಟುಂಬ ಸಮೇತರಾಗಿ ಚಿತ್ರಮಂದಿರಕ್ಕೆ ತೆರಳಿ ಎರಡನೇ ಮದುವೆ ನೋಡಿ ಮನಸಾರೆ ನಕ್ಕಿದ್ದಾರೆ. ಆ ಮೂಲಕ ರಾಜಕೀಯ ಜಂಜಾಟಗಳನ್ನು ಎರಡು ಗಂಟೆಗಳ ಕಾಲ ಮರೆತು ಹಾಯಾಗಿ ಇದ್ದರು ಎನ್ನಬಹುದು.
ಚಿತ್ರ ನೋಡಿ ನಗುತ್ತಾ ಬಂದ ಮುಖ್ಯಮಂತ್ರಿಗಳನ್ನು ಪತ್ರಕರ್ತರು, ಹೇಗಿದೆ ಸಾರ್, ಎರಡನೇ ಮದುವೆ ಎಂದಾಗ, ಯಡಿಯೂರಪ್ಪ, ಚೆನ್ನಾಗಿದೆ. ಒಂದ್ಸಾರಿ ನೋಡಬಹುದು. ಬರೀ ರಾಜಕೀಯದಿಂದಾಗಿ ನನಗೆ ಮನರಂಜನೆಯೇ ಮರೆತು ಹೋಗಿದೆ. ಅದಕ್ಕಾಗಿ ಕುಟುಂಬ ಸಮೇತನಾಗಿ ಬಂದು ಚಿತ್ರ ನೋಡಿದ್ದೇನೆ. ಎರಡು ಗಂಟೆ ಕಾಲ ಮನರಂಜನೆ ನೀಡಿತು. ಇನ್ನು ಮುಂದೆ ತಿಂಗಳಿಗೊಮ್ಮೆಯಾದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಸ್ವಲ್ಪ ಮನರಂಜನೆ ಪಡೆಯೋಣ ಅಂತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.
ಎರಡನೇ ಮದುವೆ ಚಿತ್ರದಲ್ಲಿ ಅನಂತನಾಗ್ ಸಸ್ಪೆಂಡ್ ಆದ ಲೋಕಾಯುಕ್ತರಾಗಿ ಕಾಣಿಸಿಕೊಂಡಿದ್ದು ಅವರ ಕಾಮಿಡಿ ನೋಡಿ ಯಡಿಯೂರಪ್ಪ ನಕ್ಕು ಹಗುರಾದರು. ಇನ್ನೂ ಕೆಲವರು, ಎರಡನೇ ಮದುವೆ ಚಿತ್ರದಲ್ಲಿ ಅನಂತನಾಗ್ ಅವರ ಡೈಲಾಗುಗಳು ಇತ್ತೀಚೆಗೆ ಕುಮಾರ ಸ್ವಾಮಿ ರಾಧಿಕಾ ಕಥೆಯ ಬಗ್ಗೆ ಥಳುಕು ಹಾಕಿಕೊಂಡಿದ್ದರಿಂದ ಕುತೂಹಲಕ್ಕಾಗಿ ಯಡ್ಡಿ ಚಿತ್ರ ನೋಡಲು ಹೋಗಿದ್ದರು ಎಂದು ಹೇಳುತ್ತಿದ್ದಾರೆ. ಆದರೆ, ಇವೆಲ್ಲವಕ್ಕೆ ತಲೆಕೆಡಿಸದೆ, ಮುಖ್ಯಮಂತ್ರಿಗಳು ಮಾತ್ರ ನಕ್ಕು ಹಗುರಾದಂತೆ ಕಂಡರು.