ಜನಪ್ರಿಯ ಹಾಗೂ ಯಶಸ್ವೀ ನಿರ್ದೇಶಕರಾದ ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರದಲ್ಲಿ ನಮ್ಮ ಎವರ್ ಗ್ರೀನ್ ನಟ ಅನಂತನಾಗ್‌ಗೆ ವಿಶಿಷ್ಟ ಪಾತ್ರ ಇದೆಯಂತೆ.
ಇತ್ತೀಚೆಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿರುವ ಅನಂತ್ನಾಗ್ ನಿಜಕ್ಕೂ ಒಬ್ಬ ಅಪ್ರತಿಮ ಕಲಾವಿದ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಭಟ್ಟರ ಮುಂಗಾರು ಮಳೆಯ ನಂತರ ಸಾಕಷ್ಟು ಅವಕಾಶ ಕುದುರಿಸಿಕೊಂಡ ಅನಂತನಾಗ್ ಹಿಂದಿನಂತೆ ಈಗಲೂ ಬಹುಬೇಡಿಕೆಯ ನಟ. ವಯಸ್ಸಿಗೆ ತಕ್ಕ ಪಾತ್ರಗಳನ್ನು ಪೂಷಣೆ ಮಾಡುವ ಅನಂತನಾಗ್ ಭಟ್ಟರ ಸಿನಿಮಾ ಗ್ಯಾಂಗಿನ ಖಾಯಂ ಸದಸ್ಯ. ಇದೀಗ ಅದು ಪಂಚರಂಗಿಯಲ್ಲೂ ಮುಂದುವರಿದಿದೆ.
ವಾರದ ಹಿಂದಷ್ಟೇ ಅನಂತನಾಗ್ ಅವರ ಮೂರು ಚಿತ್ರಗಳು ಬಿಡುಗಡೆಯಾಗಿವೆ. ಮೂರರಲ್ಲೂ ಇವರ ನಟನೆ ಬಗ್ಗೆ ಎರಡು ಮಾತೇ ಇಲ್ಲ ಬಿಡಿ. ಈಗಾಗಲೇ ಎರಡನೇ ಮದುವೆ ಚಿತ್ರದಲ್ಲಿ ಅನಂತನಾಗ್ ಸಾಕಷ್ಟು ಮಂದಿಯನ್ನು ಥಿಯೇಟರಿಗೆ ಎಳೆದು ತರುವ ಅಭಿನಯ ಚಾತುರ್ಯ, ನಗೆಬುಗ್ಗೆ ಹರಿಸಿದ್ದಾರೆ.
ಇವೆಲ್ಲವುಗಳ ನಡುವೆ ಇದೀಗ ಸಿದ್ಧವಾಗಿರುವ ಪಂಚರಂಗಿಯಲ್ಲಿ ಅನಂತನಾಗ್ ಅವರಿಗೆ ಅತ್ಯುತ್ತಮ ಪಾತ್ರ ನೀಡಲಾಗಿದೆಯಂತೆ. ಈ ಪಾತ್ರದ ಅಭಿನಯಕ್ಕೆ ಅನಂತ್ ರಾಷ್ಟ್ತ್ರಮಟ್ಟದ ಪುರಸ್ಕಾರ ಪಡೆದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಗಾಂಧಿನಗರದ ಕೆಲವರು. ಚಿತ್ರದಲ್ಲಿ ಅವರ ಪಾತ್ರ ಪೋಷಣೆ ಆ ರೀತಿ ಇದೆ ಎನ್ನಲಾಗುತ್ತಿದೆ.
ಅನಂತನಾಗ್ ಅವರಿಗೂ ಅಷ್ಟೇ. ಭಟ್ಟರ ಸಿನಿಮಾಗಳಲ್ಲಿ ನಟಿಸೋದು ಅಂದ್ರೆ ಪಂಚ ಪ್ರಾಣ. ಕಾರಣ ಭಟ್ಟರ ಚಿತ್ರಗಳ ಪಾತ್ರ ಪೋಷಣೆಯೇ ಅಂಥದ್ದಾಗಿರುತ್ತದೆ. ಅಲ್ಲಿ ಅಭಿನಯಕ್ಕಿಂತಲೂ ಆ ತಂಡದಲ್ಲಿರೋದೇ ಒಂದು ಖುಷಿ ಎನ್ನುತ್ತಾರೆ ಅನಂತ್.
ಒಟ್ಟಾರೆ, ಪಂಚರಂಗಿ ಚಿತ್ರ ಭಟ್ಟರ ಚಿತ್ರವೆಂಬ ಕಾರಣದ ಜೊತೆಗೆ ಅನಂತನಾಗ್ ವರಸೆಯನ್ನು ನೋಡಲು ಚಿತ್ರ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದೆ ಎಂದರೆ ತಪ್ಪಲ್ಲ.