ಕನ್ನಡದ ಹಲವು ಚಿತ್ರ ನೋಡಿ ಅದರಿಂದ ಆಗುವ ನೋವು, ಪ್ರೇರಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಆತ್ಮಹತ್ಯೆಗೆ ಪರಿಹಾರ ನೀಡುವ ಯಾವುದಾದರೂ ಚಿತ್ರ ಇದ್ದರೆ ಅದು ಲಿಫ್ಟ್ ಕೊಡ್ಲಾ?
ಒಂದೇ ಬಸ್ಸನ್ನೇರಿ ಹನ್ನೊಂದು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ತೆರಳುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ. ಕಷ್ಟದ ನಡುವೆಯೂ ಕಾಮೆಡಿ ಮೊಳಕೆಯೊಡೆಯುತ್ತದೆ. ನಕ್ಕು ನಗಿಸುತ್ತಲೇ ಕಷ್ಟಗಳು ಬಿಚ್ಚಿಕೊಳ್ಳುತ್ತವೆ. ಜಗ್ಗೇಶ್ ಚಿತ್ರದಲ್ಲಿ ಮನಸ್ಸು ಬಿಚ್ಚಿ ನಟಿಸಿದ್ದಾರೆ. ಕೋಮಲ್ ಕೂಡಾ ಜಗ್ಗೇಶ್ ಜೊತೆಗೂಡಿ ಹಾಸ್ಯೋತ್ಸವಕ್ಕೆ ಮುನ್ನುಡಿ ಬರೆಯಲಿದ್ದಾರೆ. ಅಶೋಕ್ ಕಶ್ಯಪ್ ನಿರ್ದೇಶನದ ಈ ಚಿತ್ರ ಇದೀಗ ರಾಜ್ಯಾದ್ಯಂತ ತೆರೆ ಕಂಡಿದೆ.
ಸ್ಯಾಂಡಲ್‌ವುಡ್ಡಿನ ಈ ಅಣ್ಣ ತಮ್ಮ ತಮ್ಮದೇ ಆದ ಪ್ರತಿಭೆಯಿಂದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ. ಜಗ್ಗೇಶ್ ನಾಯಕನಾಗಿ ಮಾಡಿರುವ ಹೆಸರನ್ನು ಕೋಮಲ್ ಹಾಸ್ಯನಟನಾಗಿಯೇ ಮಾಡಿದ್ದಾರೆ. ಇಬ್ಬರೂ ಸೇರಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡು ಇದೀಗ ಕಮಾಲ್ ಮಾಡಲು ಹೊರಟಿದ್ದಾರೆ. ಉಳಿದಂತೆ, ಸಾಧುಕೋಕಿಲಾ, ರಾಜು ತಾಳಿಕೋಟೆ, ಶ್ರೀನಿವಾಸಮೂರ್ತಿ ಇದ್ದಾರೆ. ನಿರ್ಮಾಪಕ ಶಂಕರ್ ರೆಡ್ಡಿ ಬ್ರೇಕ್‌ಗಾಗಿ ಕಾದು ಕುಳಿತಿದ್ದಾರೆ.
ರಾಜ್ಯದಲ್ಲಿ, ದೇಶದ ಕೆಲವೆಡೆ ಹಾಗೂ ಯುಎಸ್ಎನಲ್ಲಿಯೂ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆಯಂತೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಮೊನ್ನೆಯಷ್ಟೇ ವಿದೇಶ ಪ್ರವಾಸ ಮುಗಿಸಿ ಬಂದಿರುವ ಕೋಮಲ್ ಹಾಗೂ ಜಗ್ಗೇಶ್ ಅವರಿಗೆ ವಿಶ್ವದಾದ್ಯಂತ ಚಿತ್ರದ ಬಗ್ಗೆ ಶುಭ ಹಾರೈಕೆ ಸಿಕ್ಕಿದೆ. ರಾಮ್ ನಾರಾಯಣ್ ಸಂಭಾಷಣೆಯ ಚಿತ್ರದಲ್ಲಿ ಅರ್ಚನಾ ಗುಪ್ತಾ ನಾಯಕಿಯಾಗಿ ನಟಿಸಿದ್ದಾರೆ.