ತೆಲುಗಿನ ಮಗಧೀರ ಚಿತ್ರದ ಬೆಡಗಿ, ಸದ್ಯಕ್ಕೆ ಭಾರೀ ಬೇಡಿಕೆಯ ದಕ್ಷಿಣ ಭಾರತದ ನಟಿ ಕಾಜಲ್ ಅಗರ್‌ವಾಲ್ ಕನ್ನಡಕ್ಕೆ ಬರುತ್ತಾರಾ? ಹೌದು. ಹಾಗೊಂದು ಸುದ್ದಿಯೊಂದು ತೇಲಿ ಬಂದಿದೆ. ಅಣಜಿ ನಾಗರಾಜ್ ನಿರ್ಮಾಣದ ತಥಾಸ್ತು ಚಿತ್ರದಲ್ಲಿ ಕಾಜಲ್ ಅಗರ್‍ವಾಲ್ ನಾಯಕಿ ಎಂಬ ಸುದ್ದಿ ಕೇಳಿ ಬರುತ್ತಿದೆ. ಪ್ರೇಮ್ ಗರಡಿಯಲ್ಲಿ ಪಳಗಿರುವ ರಘು ಹಾಸನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಹೌದು. ನಿರ್ದೇಶಕ ರಘು ಹಾಸನ್ ಹೇಳುವ ಪ್ರಕಾರ, ಈಗಾಗಲೇ ಈ ಚಿತ್ರದ ನಾಯಕಿ ಸ್ಥಾನಕ್ಕೆ ಹಿಂದಿಯ ಸೋನಂ ಕಪೂರ್ ಅವರನ್ನು ಹಾಗೂ ಕಾಜಲ್ ಅಗರ್‌ವಾಲ್ ಅವರನ್ನು ಸಂಪರ್ಕಿಸಲಾಗಿದೆ. ಕಾಜಲ್ ಅಗರ್‌ವಾಲ್ ಅವರನ್ನೇ ಕರೆತರುವ ಪ್ರಯತ್ನ ಸಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.
ಚಿತ್ರದ ನಾಯಕನ ಸ್ಥಾನಕ್ಕೆ ಈಗಾಗಲೇ ಹೊಸಮುಖ ಚಿರಾಗ್ ಅವರನ್ನು ಆಯ್ಕೆ ಮಾಡಲಾಗಿದೆ. ಚಿರಾಗ್ ಹಿರಿಯ ನಿರ್ಮಾಪಕ ಸೋಮಣ್ಣ ಅವರ ಪುತ್ರ.
ಚಿತ್ರಕ್ಕೆ ಅರಸು ಚಿತ್ರದ ಖ್ಯಾತಿಯ ಜೋಶ್ವಾ ಶ್ರೀಧರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಕವಿರಾಜ್, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಮೊದಲಾದವರು ಗೀತರಚನೆ ಮಾಡಿದ್ದಾರೆ. ಮೊನ್ನೆಯಷ್ಟೇ ಜು.9ರಂದು ಕಂಠೀರವ ಸ್ಟುಡಿಯೊದಲ್ಲಿ ಮುಹೂರ್ತ ನಡೆದಿದೆ. ಚಿತ್ರೀಕರಣ ಶೀಘ್ರವೇ ಆರಂಭವಾಗಲಿದೆ ಎಂದು ಸಹ ಹೇಳಲಾಗುತ್ತಿದೆ.