ಯೋಗರಾಜ ಭಟ್ಟರು ಮುಂಗಾರು ಮಳೆ, ಗಾಳಿಪಟ ಚಿತ್ರದ ನಂತರ ಅತ್ಯಂತ ಗಂಭೀರವಾಗಿ ಇನ್ನೊಂದು ಚಿತ್ರದ ಕಾರ್ಯದಲ್ಲಿ ತೊಡಗಿದ್ದಾರೆ. ಚಿತ್ರದ ಹೆಸರು ಈಗಾಗಲೇ ಗೊತ್ತಿರುವಂತೆ ಪಂಚರಂಗಿ.
ವಿಶೇಷ ಅಂದರೆ ಇವರು 'ಪಂಚರಂಗಿ' ಚಿತ್ರಕ್ಕೆ ನಿರ್ಮಾಪಕರು ಸಹ ಆಗಿದ್ದಾರೆ. ತಾವೇ ದುಡ್ಡು ಹಾಕಿದ್ದಾರೆ. ಈಗ ಚಿತ್ರ ಬಹುತೇಕ ಪೂರ್ಣಗೊಂಡಿದೆ. ಬಹು ನಿರೀಕ್ಷೆಯ ಈ ಚಿತ್ರ ಗೆದ್ದರೆ, ಭಟ್ಟರನ್ನು ಹಿಡಿಯೋರು ಯಾರೂ ಇಲ್ಲ. ಸೋತರೂ ನಿರೀಕ್ಷೆಯೇನೂ ಕಡಿಮೆ ಆಗೋದಿಲ್ಲ. ಕಾರಣ ಭಟ್ಟರು ಮುಂಗಾರು ಮಳೆ ಮೂಲಕ ಹುಟ್ಟು ಹಾಕಿದ ಟ್ರೆಂಡೇ ಅಂಥದ್ದು. ಭಟ್ಟರೊಂದು ಚಿತ್ರ ಮಾಡಿದ್ದಾರೆ ಅಂದ ತಕ್ಷಣ ಸ್ಟಾರ್‌ಗಳ ಮುಖ ನೋಡದೆ ಥಿಯೇಟರಿಗೆ ಬರೋ ಟ್ರೆಂಡು ಈಗ ಇದೆ. ಹಾಗಾಗಿ ಸಹಜವಾಗಿಯೇ ಪಂಚರಂಗಿ ಮೇಲೆ ನಿರೀಕ್ಷೆ ಜೋರಾಗಿಯೇ ಇದೆ.
ದುಡ್ಡು ಹಾಕಿ ನಿರ್ಮಾಪಕನಾದರೂ ಭಟ್ಟರಂತೂ ನಿಶ್ಚಿಂತರಾಗಿದ್ದಾರಂತೆ. ಕಾರಣ, ಚಿತ್ರಕ್ಕೆ ಖರ್ಚು ಮಾಡಿದ ಬಜೆಟ್ಟಿನ ಅರ್ಧದಷ್ಟು ದುಡ್ಡು ಈಗಾಗಲೇ ಸ್ಯಾಟಲೈಟ್ ಹಕ್ಕಿನಿಂದ ಬಂದುಬಿಟ್ಟಿದೆಯಂತೆ.
PR
ನಾನಂತೂ ಹಣದ ವಿಚಾರದಲ್ಲಿ ಸೇಫ್. ಕಾರಣ, ಸ್ಯಾಟಲೈಟ್ ಹಕ್ಕು, ಆಡಿಯೋ, ವೀಡಿಯೋ ಹಕ್ಕುಗಳ ಹಣ ಲೆಕ್ಕ ಹಾಕಿದರೆ ನಾವು ಲಾಭದಲ್ಲೇ ಇದ್ದೇವೆ. ಹೀಗಾಗಿ ಚಿತ್ರ ತೋಪಾದರೂ, ಫುಟ್‌ಪಾತ್‌ಗೆ ಬರುವ ಪರಿಸ್ಥಿತಿ ಬರಲಾರದು ಎನ್ನುತ್ತಾರೆ ಭಟ್ಟರು.
ಇವರೇ ಹೇಳುವ ಪ್ರಕಾರ ಇದು ಅವರ ಸಿನಿಮಾ ಬದುಕಿನ ಅಲ್ಟಿಮೇಟ್ ಚಿತ್ರವಂತೆ. ಮುಂದಿನ ಚಿತ್ರದ ಹೊತ್ತಿಗೆ ನಾನು ಹೊಸ ಭಟ್ಟನಾಗದಿದ್ರೆ, ಮಳೆಯನ್ನು ಮರೆಯದಿದ್ದರೆ ಜನ ಅಟ್ಟಿಸಿಕೊಂಡು ಬರುತ್ತಾರೆ ಎನ್ನುವ ಆತಂಕವೂ ನನ್ನಲ್ಲಿದೆ ಎಂದು ಮುಕ್ತವಾಗಿ ಹೇಳಿಕೊಳ್ಳುತ್ತಾರೆ.
ವಿಶೇಷ ಅಂದರೆ, ದಿಗಂತ್, ನಿಧಿ ಸುಬ್ಬಯ್ಯ, ರಮ್ಯಾ ಬಾರ್ನೆ, ಅನಂತನಾಗ್ ಮತ್ತಿತರರ ತಾರಾಗಣ ಹೊಂದಿರುವ ಈ 'ಪಂಚರಂಗಿ' ಚಿತ್ರದಲ್ಲಿ ಅಂತಹ ಕಥೆಯೇನಿಲ್ಲವಂತೆ. ಲೇವಡಿ ಹೊಂದಿದ ಸಂಭಾಷಣೆಯೇ ಈ ಚಿತ್ರದ ಹೈಲೈಟ್. ಜನ ಇವರ ಸಂಭಾಷಣಾ ಶೈಲಿಗಾಗಿಯೇ ಚಿತ್ರ ಮಂದಿರಕ್ಕೆ ಬರುತ್ತಾರೆ ಎಂಬುದೂ ಕೂಡಾ ಅಷ್ಟೇ ನಿಜ. ಮುಂಗಾರು ಮಳೆ ಚಿತ್ರ ತನ್ನ ಸೊಗಸಾದ ಹಾಡು, ಮುದಗೊಳಿಸುವ ಕ್ಯಾಮರಾ ಕೈಚಳಕದೊಂದಿಗೆ ಮೆಚ್ಚುಗೆ ಪಡೆದ ಮತ್ತೊಂದು ವಿಭಾಗ ಎಂದರೆ ಚಿತ್ರದ ಡೈಲಾಗು. ಭಟ್ಟರ ಎಲ್ಲ ಚಿತ್ರಗಳಲ್ಲೂ ಇದು ಆಮೇಲೆ ಮುಂದುವರಿದಿದೆ. ಇದೀಗ ಪಂಚರಂಗಿಯಲ್ಲೂ ಅದೇ ಕಾದಿದೆ ಎನ್ನಲಾಗಿದೆ. ಅಂಥವರಿಗಾಗಿ ಈ ಚಿತ್ರದಲ್ಲಿ ಹೊಸ ಅನುಭವ ಕಾದಿದೆ ಎಂದು ಹೇಳಲಾಗುತ್ತಿದೆ.