ಕನ್ನಡದಲ್ಲಿ ಕೃಷ್ಣನ ಹೆಸರಲ್ಲಿ ಸಾಕಷ್ಟು ಚಿತ್ರಗಳು ಬಂದಿವೆ. ಗಡಿಬಿಡಿ ಕೃಷ್ಣ, ರಾಮಕೃಷ್ಣ, ಕೃಷ್ಣಾರ್ಜುನ, ಕೃಷ್ಣಾ ನೀ ಕುಣಿದಾಗ, ಕೃಷ್ಣಾ ನೀ ಬೇಗನೆ ಬಾರೋ, ಕೃಷ್ಣ, ಕೃಷ್ಣಾ ನೀ ಲೇಟಾಗ್ ಬಾರೋ, ಕೃಷ್ಣನ್ ಲವ್ ಸ್ಟೋರಿ... ಹೀಗೆ ಅದಷ್ಟೋ ಕೃಷ್ಣರು ಕನ್ನಡದ ಸಿನೆಮಾ ಇತಿಹಾಸದಲ್ಲಿ ಬಂದು ಹೋಗಿದ್ದಾರೆ. ಸದ್ಯ ಓಡುತ್ತಿರುವಾತನೆಂದರೆ ಕೃಷ್ಣನ್ ಲವ್ ಸ್ಟೋರಿ. ಇವೆಲ್ಲವುಗಳ ನಡುವೆಯೇ ಮತ್ತೊಬ್ಬ ಕೃಷ್ಣ ಹೊರಬರಲು ಹೊರಟಿದ್ದಾನೆ. ಆತ ಕ್ರೇಜಿ ಕೃಷ್ಣ.
ಪ್ರಶಾಂತ್ ಮಾಂಬಳ್ಳಿ ನಿರ್ದೇಶನದ ಹೊಸ ಚಿತ್ರ ಈ ಕ್ರೇಜಿ ಕೃಷ್ಣ. ಪಕ್ಕಾ ಹಳ್ಳಿ ಸೊಗಡಿನ ಚಿತ್ರಕ್ಕೆ ರಾಮ್ ನಾರಾಯಣ್ ಸಂಭಾಷಣೆ ಬರೆದಿದ್ದಾರೆ. ಹೀಗೆ ಅನ್ನುವುದಕ್ಕಿಂತ ಕಥೆ ಹಾಗೂ ಅದರ ಭಾವಕ್ಕೆ ತಕ್ಕ ಹಾಗೇ ಪೆನ್ನು ಹಿಡಿದಿದ್ದಾರೆ ಎನ್ನುವುದು ನಿರ್ದೇಶಕರ ಅಭಿಪ್ರಾಯ.
ಚಿತ್ರದಲ್ಲಿ ನಲವತ್ತು ಪಾತ್ರಗಳು ಬರುತ್ತವೆ. ಅದು ಪ್ರತಿಯೊಬ್ಬರ ಜೀವನಕ್ಕೂ ಹತ್ತಿರವಾಗಿರುತ್ತವೆ. ಒಂದು ಭಾಗ ಹಳ್ಳಿಯಲ್ಲಿ ನಡೆದರೆ, ಇನ್ನೊಂದು ವಿಭಾಗದಲ್ಲಿ ಹೋಟೆಲ್ ಅನ್ನು ಕಾಣಬಹುದು ಎನ್ನುತ್ತಾರೆ ರಾಮ್ ನಾರಾಯಣ್.
ಈ ಚಿತ್ರಕ್ಕಾಗಿ ನಾಯಕನಾಗಿ ಕಿಶನ್ ಅನ್ನೋ ಹೊಸ ಹುಡುಗ ಆಯ್ಕೆಯಾಗಿದ್ದಾರೆ. ಹಾಸನ ಮೂಲದ ಈತ ಎಂಬಿಎ ಮುಗಿಸಿದ್ದಾರೆ. ಮಾಡೆಲ್ ಲೋಕದಲ್ಲೂ ಹೆಸರು ಮಾಡಿದ್ದು, ಚಿತ್ರರಂಗದ ಕನಸು ಕಾಣುತ್ತಿದ್ದಾರೆ. ಈ ಹೊಸ ಕೃಷ್ಣನ ಭವಿಷ್ಯ ದೇವನೇ ಬಲ್ಲ.