ಸಮಾಜದಲ್ಲಿ ಪ್ರಖ್ಯಾತಿಗೊಳಗಾದವರ ಗಾಸಿಪ್ ಕಥೆಗಳನ್ನು, ನಿಜ ಜೀವನವನ್ನು ಸಿನಿಮಾ ಮಾಡಲು ಹೊರಟು ಅದು ಅರ್ಧಕ್ಕೇ ನಿಂತ ಕಥೆಗಳು ಎಷ್ಟೋ ಇವೆ. ಕುಮಾರಸ್ವಾಮಿ- ರಾಧಿಕಾರ ಸಿನಿಮಾ ಮಾಡಲು ಹೊರಟ ರವಿ ಬೆಳೆಗೆರೆ ಈ ಚಿತ್ರದ ಸುದ್ದಿ ಬಿಟ್ಟು ಈಗ ಕೈಕಟ್ಟಿ ಕುಳಿತಿರುವುದು ಗೊತ್ತು. ಇದೀಗ ಅಂಥಾ ಉದಾಹರಣೆಗಳು ಕಣ್ಣ ಮುಂದಿರುವಾಗಲೇ ಮತ್ತೊಂದು ಸಿನಿಮಾ ಇದೇ ಹಾದಿ ಹಿಡಿಯಲು ಹೊರಟಿದೆ. ಆ ಚಿತ್ರ ಇನ್ನಾವುದೂ ಅಲ್ಲ. ರಮೇಶ್ ಅರವಿಂದ್ ನಟನೆಯ ಸ್ವಾಮೀಜಿ!
ಸಮಾಜದಲ್ಲಿ ಸರ್ವ ರೀತಿಯಲ್ಲೂ ಮಾನಭಂಗಕ್ಕೆ ಒಳಗಾಗಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ ಕಾಮಿಸ್ವಾಮಿಯ ಕಥೆಯಿಂದ ಪ್ರೇರೇಪಣೆಗೊಂಡು ಅದೇ ಹಾದಿಯಲ್ಲಿ ಇತ್ತೀಚೆಗೆ ಸ್ವಾಮೀಜಿ ಹೆಸರಿನ ಚಿತ್ರ ನಿರ್ಮಾಣದ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಇದಕ್ಕೀಗ ಕೊಕ್ ಬಿದ್ದಿದೆ. ನಿತ್ಯಾನಂದ ಪರ ವಕೀಲರು ಇದೀಗ ಆ ಸಿನಿಮಾಕ್ಕೆ ತಡೆಯೊಡ್ಡಿದ್ದಾರೆ.
ಸಾಧು ಕೋಕಿಲಾ ಈಗಾಗಲೇ 'ಸ್ವಾಮೀಜಿ' ಹೆಸರಿನ ಚಿತ್ರ ಮಾಡುತ್ತಿದ್ದು, ಚಿತ್ರದಲ್ಲಿ ರಮೇಶ್ ಅರವಿಂದ್ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ ಎಂದಿದ್ದರು. ಇದೇ ಜುಲೈ ತಿಂಗಳಲ್ಲಿ ಚಿತ್ರ ಸೆಟ್ಟೇರುವುದಿತ್ತು. ನಿತ್ಯಾನಂದರ ಲೀಲೆಯನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರ ಸಿದ್ಧವಾಗಲಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಪರ ವಕೀಲರು ಇದಕ್ಕೆ ಕಾನೂನು ಮೂಲಕವೇ ತಡೆಯೊಡ್ಡಿದ್ದಾರೆ.
ಈಗಾಗಲೇ ಸ್ವಾಮೀಜಿ ಚಿತ್ರದ ನಿರ್ಮಾಪಕರು ಕೋರ್ಟು ಕಾರಣ ಕೇಳಿ ನೀಡಿದ ನೋಟೀಸಿಗೆ, ಇದು ನಿತ್ಯಾನಂದನ ಕಥೆಯಲ್ಲ. ಇದು ಪ್ರಮುಖ ಸ್ವಾಮೀಜಿಗಳೊಬ್ಬರ ಕಥೆಯಷ್ಟೇ. ನ್ಯಾನಂದರ ಬಗ್ಗೆ ನಮಗೆ ಗೌರವವಿದೆ. ಚಿತ್ರದಲ್ಲಿ ಎಲ್ಲೂ ನಿತ್ಯಾನಂದನ ಹೆಸರು ಬಳಸುವುದಿಲ್ಲ. ನಿತ್ಯಾನಂದನಿಗೂ ಈ ಚಿತ್ರಕಥೆಗೂ ಸಂಬಂಧವಿಲ್ಲ ಎಂದಿದ್ದಾರೆ. ಆದರೆ ಇದು ಇನ್ನು ಯಾವ ರೀತಿಯ ಸ್ವರೂಪ ಪಡೆಯುವುದೋ ಗೊತ್ತಿಲ್ಲ.
ಮಿಮಿಕ್ರಿಗೆ ಧಮಕಿ: ಇತ್ತೀಚೆಗಷ್ಟೇ ಕಾಮಿ ಸ್ವಾಮಿ ಎಂಬ ಸಿಡಿ ಬಿಡುಗಡೆ ಮಾಡ ಯಶಸ್ವಿ ಮಾರಾಟ ಕಂಡಿರುವ ಮಿಮಿಕ್ರಿ ದಯಾನಂದ್ ಅವರಿಗೂ ಈ ಸಿಡಿ ಬಿಡುಗಡೆ ಮಾಡದಂತೆ ನಿತ್ಯಾನಂದರ ಭಕ್ತರಿಂದ ಬೆದರಿಕೆ ಬಂದಿತ್ತಂತೆ. ಆದರೆ ಅವರ ಬೆದರಿಕೆಗೆ ಬಗ್ಗದೆ, ಬೇಕಾದರೆ ನನ್ನ ಸಿಡಿಯನ್ನೂ ನೀವು ಹೊರತನ್ನಿ ಎಂದು ಮಿಮಿಕ್ರಿ ದಯಾನಂದ್ ಪ್ರತಿ ಸವಾಲೊಡ್ಡಿದ್ದರಂತೆ!