ನಿಮಗೆ ಪೂಜಾರಿ ಸಿನಿಮಾ ಗೊತ್ತಿರಬೇಕಲ್ಲಾ? ಹೌದು. ಕೆಲ ವರ್ಷಗಳ ಹಿಂದೆ ನೀವು ಪೂಜಾರಿ ಚಿತ್ರವನ್ನು ನೋಡಿರುತ್ತೀರಿ, ಅಥವಾ ಚಿತ್ರದ ಬಗ್ಗೆ ಕೇಳಿರುತ್ತೀರಿ. ಇದೇ ಪೂಜಾರಿ ಚಿತ್ರದ ನಿರ್ದೇಶಕ ಶರಣ್ ಈಗ 2012ನೇ ಇಸವಿಯ ಸಿದ್ಧತೆಯಲ್ಲಿ ಇದ್ದಾರೆ. ಇದೇನು ವರ್ಷವನ್ನು ಚಿತ್ರರಂಗದವರು ಸಿದ್ಧಪಡಿಸುತ್ತಾರಾ ಅಂತ ಕಣ್ಣರಳಿಸಬೇಡಿ. ಇದು ಹೊಸ ಚಿತ್ರದ ಹೆಸರು.
ಈ ಚಿತ್ರ ಪ್ರಳಯ ಹಾಗೂ ಪ್ರಣಯದ ನಡುವೆ ನಡೆಯುವ ಸಂಘರ್ಷದ ಕಥೆಯಂತೆ. ಶರಣ್ ಇಲ್ಲಿ ಒಂದಷ್ಟು ಅಪ್ಡೇಟ್ ಆಗಿದ್ದಾರೆ. ಕಥೆ ಹೇಳುವ ಪರಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಯಶಸ್ಸಿನ ಗುಟ್ಟನ್ನು ಕೆದಕಿ ತೆಗೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಚಿತ್ರದಲ್ಲಿ ಐದು ಹುಡುಗರು ಇದ್ದಾರಂತೆ. ಇವರೆಲ್ಲರಿಗೂ ಒಬ್ಬಳೇ ನಾಯಕಿ. ಆಕೆ ಸುಪ್ರೀತಾ. ನಾಯಕರಾಗಿ ವಿಕ್ರಮ್, ಹರ್ಷ, ಪ್ರಜ್ಜು, ಶ್ರೀಧರ್ ಮೊದಲಾದ ಹೊಸ ಹುಡುಗರನ್ನು ಬಳಸಿಕೊಳ್ಳುತ್ತಿದ್ದಾರೆ ಶರಣ್. ಉಳಿದಂತೆ ರಂಗಾಯಣ ರಘು, ಶೋಭರಾಜ್, ನಾಗಶೇಖರ್ ಮೊದಲಾದವರಿದ್ದಾರೆ. ಕಾಮಿಡಿಗೆ ರಾಜು ತಾಳಿಕೊಟೆ, ಸಾಧುಕೋಕಿಲ, ಬ್ಯಾಂಕ್ ಜನಾರ್ಧನ್, ಕರಿಬಸವಯ್ಯ, ಸಿಹಿ ಕಹಿ ಚಂದ್ರು ಇದ್ದಾರೆ.
ಕಥೆಯ ಸಾರಾಂಶ ಇಷ್ಟೇ. ಪ್ರಳಯದ ಮುನ್ನ ನಾವು ಏನನ್ನಾದರೂ ಸಾಧಿಸಬೇಕು ಎಂದು ಒಂದಷ್ಟು ಹುಡುಗರು ಗುಳೆ ಹೊರಡುತ್ತಾರೆ. ಅವರಿಗೆ ಸಾಕಷ್ಟು ಸವಾಲು, ಸಂಘರ್ಷ ಎದುರಾಗುತ್ತದೆ. ಅದನ್ನು ಅವರು ಹೇಗೆ ಎದುರಿಸುತ್ತಾರೆ. ಕೊನೆಯಲ್ಲಿ ಗೆಲ್ಲುತ್ತಾರಾ? ಸೋಲುತ್ತಾರಾ? ಅನ್ನುವುದನ್ನು ತೆರೆ ಮೇಲೆ ವೀಕ್ಷಿಸಿ.