ಜೋಗಯ್ಯಕ್ಕೆ ಯಾರು?: ಅನುಷ್ಕಾ, ಅಮೃತಾ ಅಥವಾ ಜ್ಯಾಕ್ವಿಲೀನ್?
IFM
ಮೊನ್ನೆಯಷ್ಟೇ ಅದ್ದೂರಿಯಾಗಿ ಸೆಟ್ಟೇರಿದ ಪ್ರೇಮ್ ನಿರ್ದೇಶನದ ಶಿವಣ್ಣರ 100ನೇ ಚಿತ್ರ ಜೋಗಯ್ಯ ಚಿತ್ರದ ಹೀರೋಯಿನ್ ಯಾರು? ಈ ಪ್ರಶ್ನೆ ಕಾಡದೆ ಇರೋದಿಲ್ಲ. ಕಾರಣ ಚಿತ್ರದ ಸಮಾರಂಭದಲ್ಲಿ ನಾಯಕಿಯ ಪತ್ತೆಯೇ ಇರಲಿಲ್ಲ. ಬಾಲಿವುಡ್ಡಿನ ಅಮಿಷಾ ಪಟೇಲ್ ನಾಯಕಿಯಂತೆ ಎಂಬ ಸುದ್ದಿ ತೇಲಿ ಬಂದರೂ, ಪ್ರೇಮ್ ಅದನ್ನು ಒಪ್ಪಿದ್ದರೂ ಅದಿನ್ನೂ ಅಂತಿಮವಾಗಿಲ್ಲ. ಸದ್ಯಕ್ಕೆ ನಾಯಕಿಯರ ಸ್ಥಾನದಲ್ಲಿ ಕೇಳಿ ಬರುತ್ತಿರುವ ಹೆಸರುಗಳು ಇನ್ನೂ ಇವೆ. ಅವು ಬಾಲಿವುಡ್ಡಿನ ಅಮೃತಾ ರಾವ್, ಬಾಲಿವುಡ್ಡಿನಲ್ಲಿದ್ದರೂ ನಮ್ಮ ಬೆಂಗಳೂರಿನ ಬೆಡಗಿ ಅನುಷ್ಕಾ ಶರ್ಮಾ ಹಾಗೂ ಶ್ರೀಲಂಕಾ ಮೂಲದ ಬಾಲಿವುಡ್ ಚೆಲುವೆ ಜ್ಯಾಕ್ವಿಲೀನ್ ಫೆರ್ನಾಂಡಿಸ್!
ಹೌದು. ನಾಯಕಿಯರ ಪಟ್ಟಿಯಲ್ಲೀಗ ಈ ಎಲ್ಲ ಹೆಸರುಗಳೂ ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ, ಅಮಿಷಾ ಪಟೇಲ್‌ಗಿಂತಲೂ ಅಮೃತಾ ರಾವ್ ಜೊತೆಗೆ ಮಾತುಕತೆ ನಡೆಯುತ್ತಿದೆ. ಆದರೆ ಅಮೃತಾ ರಾವ್ ಬರೋಬ್ಬರಿ 60 ಲಕ್ಷ ರೂಪಾಯಿಗಳ ಬೇಡಿಕೆಯಿಟ್ಟಿದ್ದಾರಂತೆ! ಆದರೆ ಪ್ರೇಮ್ ನಿರ್ಮಾಣ ಸಂಸ್ಥೆ 45 ಲಕ್ಷ ರೂಪಾಯಿಗಳವರೆಗೆ ಸಂಭಾವನೆ ನೀಡಲು ಸಿದ್ಧವಿದೆ ಎನ್ನಲಾಗುತ್ತಿದೆ! ಆದರೆ ಈ ಮೊತ್ತಕ್ಕೆ ಆಕೆ ಒಪ್ಪುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.
IFM
ಆದರೆ ಇತ್ತ ಪ್ರೇಮ್ ಮಾತ್ರ ಹಣಕಾಸಿನ ಸಮಸ್ಯೆಯನ್ನು ಅಲ್ಲಗಳೆಯುತ್ತಾರೆ. ಹಣದ ಬಗ್ಗೆ ಸಮಸ್ಯೆಯೇ ಎದುರಾಗಿಲ್ಲ. ಬದಲಾಗಿ ಡೇಟ್ಸ್ ಸಮಸ್ಯೆ ತಲೆದೋರಿದೆ. ನಾವು ಅನುಷ್ಕಾ ಶರ್ಮಾ(ಶಾರುಖ್ ಜೊತೆ ರಬ್ ನೇ ಬನಾ ದೀ ಜೋಡಿ ಚಿತ್ರದಲ್ಲಿ ನಟಿಸಿದಾಕೆ) ಹಾಗೂ ಅಮೃತಾ ರಾವ್ (ಇಶ್ಕ್ ವಿಶ್ಕ್, ವಿವಾಹ್ ಮತ್ತಿತರ ಯಶಸ್ವಿ ಚಿತ್ರಗಳ ಬೆಡಗಿ) ಅವರನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆಯಾದರೂ, ಅವರು ಕೇವಲ 6 ದಿನಗಳ ಡೇಟ್ಸ್ ನೀಡಲು ಮುಂದಾಗಿದ್ದಾರೆ. ಆದರೆ ನಮಗೆ ತುಂಬ ಡೆಡಿಕೇಟ್ ಆಗಿ ಕೆಲಸ ಮಾಡುವ ನಟಿ ಬೇಕಾಗಿದೆ. ಹಾಗಾಗಿ ಕೊಂಚ ಸಮಸ್ಯೆ ಇದೆ ಎನ್ನುತ್ತಾರೆ ಪ್ರೇಮ್.
ಇದೀಗ ಅನುಷ್ಕಾ ಶರ್ಮಾ ಹಾಗೂ ಅಮೃತಾ ರಾವ್ ಅವರ ಬದಲಾಗಿ ಪ್ರೇಮ್ ಅಲಾದಿನ್ ಚಿತ್ರದಲ್ಲಿ ಬಚ್ಚನ್ ಜೊತೆ ನಟಿಸಿ ಜನಮನ ಗೆದ್ದ ಶ್ರೀಲಂಕಾ ಸುಂದರಿ ಜ್ಯಾಕ್ವಿಲೀನ್ ಫೆರ್ನಾಂಡಿಸ್‌ಳನ್ನು ಆಯ್ಕೆ ಮಾಡುವ ಗಾಳಿಸುದ್ದಿಯೂ ಇದೆ. ಅಂತಿಮವಾಗಿ ಯಾರು ಆಯ್ಕೆಯಾಗುತ್ತಾರೋ ಕಾಯಬೇಕು.