ಮಾಸ್ಟರ್ ಆನಂದ್ ನಾಯಕರಾಗಿ ನಿಮಗೆ ಗೊತ್ತು. ಇತ್ತೀಚೆಗೆ ಎಸ್ಎಸ್ಎಲ್‌ಸಿ ನನ್ಮಕ್ಳು ಮೂಲಕ ಕಿರುತೆರೆಯಲ್ಲಿ ನಿರ್ದೇಶಕರಾದವರು. ಆದರೆ ಈಗ ಹಿರಿತೆರೆಗೂ ಅವರ ಕಾರ್ಯಕ್ಷೇತ್ರ ವಿಸ್ತಾರವಾಗಿದೆ.
ಹೌದು. ಅವರ ನಿರ್ದೇಶನದ 5 ಈಡಿಯಟ್ಸ್ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗುತ್ತಿದೆ. ವಿಶೇಷ ಅಂದರೆ ಚಿತ್ರದ ಚಿತ್ರೀಕರಣಕ್ಕೆ ಯಾವುದೇ ಅಡೆತಡೆ ಉಂಟಾಗಿಲ್ಲವಂತೆ. ಸುಸೂತ್ರವಾಗಿ ಮುಗಿದಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಹಣ ಮಾಡಲು ಸಾಕಷ್ಟು ಮಾರ್ಗಗಳು ಇವೆ. ಅದರಲ್ಲಿ ಕೆಲವು ಒಳ್ಳೆಯದು, ಇನ್ನು ಕೆಲವು ಕೆಟ್ಟದ್ದು. ಹೆಚ್ಚಿನವು ಕೆಟ್ಟ ಮಾರ್ಗಗಳು. ಆದರೆ ಕೆಟ್ಟ ಮಾರ್ಗ ತುಳಿಯುವುದು ಸರಿಯಲ್ಲ. ಒಳ್ಳೆ ಮಾರ್ಗದಲ್ಲಿ ದುಡ್ಡು ಬರುವುದು ಬಹಳ ನಿಧಾನ. ಹೀಗಾಗಿ ಹೆಚ್ಚಿನವರು ಕೆಟ್ಟ ಮಾರ್ಗವಾದರೂ ಸರಿ, ಹಣ ಗಳಿಸುವುದು ಅನಿವಾರ್ಯ ಎಂದು ಮುಂದಡಿ ಇಡುತ್ತಾರೆ. ಆದರೆ ನಮ್ಮ ಆನಂದ್ ಆ ತರಹದವರಲ್ಲವಂತೆ. ದುಡ್ಡು ನಾವು ಮಾಡಲು ಹೋಗಬಾರದು, ಹಣ ತಾನಾಗಿಯೇ ಬರಬೇಕು ಅನ್ನುವ ಆಸಾಮಿ. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಹಣ ತಾನಾಗಿಯೇ ಬರುತ್ತದೆ ಎನ್ನುವುದು ಅವರ ಅಭಿಪ್ರಾಯ.
ತಮ್ಮ ಜೀವನದಲ್ಲಿಯೂ ಇದೇ ಸಿದ್ದಾಂತವನ್ನು ಅಳವಡಿಸಿಕೊಂಡಿರುವ ಇವರು, 5 ಈಡಿಯಟ್ಸ್ ಚಿತ್ರವನು ಸಹ ಇದೇ ಆಧಾರದ ಮೇಲೆ ಮಾಡಿದ್ದಾರಂತೆ. ಇದೇ ರೀತಿ ಚಿತ್ರದಲ್ಲಿ ಬರುವ ಐವರು ನಾಯಕರಿಗೆ ಒಂದೊಂದು ಕ್ರೇಜ್ ಇರುತ್ತದೆ. ಒಬ್ಬನಿಗೆ ಸಿನಿಮಾ ಹುಚ್ಚು, ಮತ್ತೊಬ್ಬನಿಗೆ ಶೋಕಿ, ಇನ್ನೊಬ್ಬನಿಗೆ ಮದ್ಯ, ಮಗದೊಬ್ಬನಿಗೆ ಪ್ರೇಮಿ ಈ ರೀತಿ ಇರುತ್ತಾರೆ. ಇವರೆಲ್ಲರ ಆಶಯ ಈಡೇರಿಕೆಯ ನಡುವಿನ ಸಂಘರ್ಷವೇ ಚಿತ್ರದ ಕಥಾವಸ್ತು.
ಒಟ್ಟಾರೆ ನಕ್ಕು ನಗಿಸುವ ಇನ್ನೊಂದು ಚಿತ್ರ ಇದಾಗಲಿದೆಯಂತೆ. ಚಿತ್ರವನ್ನು ಲೋಕೇಶ್ ಮೂರ್ತಿ ನಿರ್ಮಿಸುತ್ತಿದ್ದಾರೆ. ಇದು ಇವರಿಗೆ ಮೊದಲ ಚಿತ್ರ. ಚಿತ್ರದ ಪ್ರಚಾರ ಇಡೀ ರಾಜ್ಯದಲ್ಲಿ ನಡೆಯುತ್ತಿದೆ. ಫ್ರೆಂಡ್ಸ್ ಚಿತ್ರದ ತಂಡದಲ್ಲಿರುವ ಸದಸ್ಯರಲ್ಲಿ ಬಹುತೇಕರು ಇಲ್ಲಿರುವುದರಿಂದ ನಿರೀಕ್ಷೆ ಜೋರಾಗಿಯೇ ಇದೆ. ಚಿತ್ರ ತೆರೆಗೆ ಬಂದ ಮೇಲಷ್ಟೇ ಈ ಎಲ್ಲ ಮಾತುಗಳಿಗೆ ಅರ್ಥ ದೊರೆಯಬಹುದೇನೋ.