ಉಪೇಂದ್ರರಿಗೆ ಭಾರೀ ಯಶಸ್ಸನ್ನು ತಂದುಕೊಟ್ಟು ಸ್ಟಾರ್‌ಗಿರಿಯನ್ನು ನೀಡಿದ 1998ರಲ್ಲಿ ಬಿಡುಗಡೆಯಾದ ಎ ಚಿತ್ರದ ಭಾಗ 2 ಬರಲಿದೆಯಂತೆ. ಹಾಗೊಂದು ಸುದ್ದಿ ಬಂದಿದೆ. ಆದರೆ ಎ- 2ನಲ್ಲಿ ಉಪೇಂದ್ರ ಇರೋದಿಲ್ವಂತೆ!
ಹೌದು. ಎ ಚಿತ್ರವನ್ನು ಅಂದು ನಿರ್ಮಿಸಿದ್ದ ಇಬ್ಬರು ನಿರ್ಮಾಪಕರಲ್ಲೊಬ್ಬರಾದ ಬಿ.ಜಗನ್ನಾಥ್ ತಮ್ಮ ಸೋದರ ಧೋ ಬಸವರಾಜು ಜೊತೆ ಸೇರಿ ಎ-2 ನಿರ್ಮಿಸಲು ತೀರ್ಮಾನಿಸಿದ್ದಾರಂತೆ. ಆದರೆ ಚಿತ್ರವನ್ನು ಉಪೇಂದ್ರ ಇಲ್ಲದೆಯೇ ಮಾಡಲಿದ್ದೇವೆ ಎಂದಿದ್ದಾರೆ. ಉಪೇಂದ್ರ ಇಲ್ಲದೆ ಎ ಚಿತ್ರ ಅಂದರೆ? ಅಂತ ನೀವು ಆಶ್ಚರ್ಯ ಪಡಬಹುದು. ಆದರೆ ಉಪೇಂದ್ರ ಇಲ್ಲದೆ ಚಿತ್ರ ಮಾಡಲು ಇವರು ನೀಡುವ ಕಾರಣವೇ ಬೇರೆ.
ವಾಸ್ತವದಲ್ಲಿ ಈ ಇಬ್ಬರು ಸೋದರ ನಿರ್ಮಾಪಕರು ಎ- 2 ಮಾಡಲು ಉಪೇಂದ್ರರಿಗಾಗಿ ಪ್ರಯತ್ನಿಸಿದರಂತೆ. ಆದರೆ ಉಪೇಂದ್ರ ಈ ಬಗ್ಗೆ ಮಾತನಾಡಲು ಮುಂಚಿತವಾಗಿ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಲು ತಿಳಿಸಿದರಂತೆ. ಇದು ಈ ಇಬ್ಬರು ನಿರ್ಮಾಪಕರಿಗೆ ಸಿಟ್ಟು ತರಿಸಿದೆಯಂತೆ. ಹಾಗಾಗಿ, ಉಪೇಂದ್ರ ಅವರಿಲ್ಲದೆಯೇ ಚಿತ್ರ ಮಾಡುತ್ತೇವೆ ಎಂದಿದ್ದಾರೆ.
ಅಷ್ಟೇ ಅಲ್ಲ. ಉಪೇಂದ್ರದ ಬೇಡಿಕೆಯನ್ನು ಈಡೇರಿಸಿ ಸಿನಿಮಾ ಮಾಡಲು ಸಾಧ್ಯವಿಲ್ಲ. ಅವರ ಲೆಕ್ಕಾಚಾರದ ಬಜೆಟ್‌ಗೂ ನಮ್ಮ ಅಂದಾಜು ಬಜೆಟ್‌ಗೂ ಅಜಗಜಾಂತರವಿದೆ. ಹೀಗಾಗಿ ಅವರನ್ನಿಟ್ಟು ಸಿನಿಮಾ ಮಾಡೋಕಾಗಲ್ಲ ಎನ್ನುತ್ತಾರೆ.
ಹಾಗಾದರೆ ಎ- 2ಗೆ ಯಾರು ನಾಯಕ ಅಂತೀರಾ? ಈಗಾಗಲೇ ಅಗ್ರಹಾರ ಎಂಬ ಸಿನಿಮಾದಲ್ಲಿ ನಟಿಸಿರುವ ಹಾಗೂ ಇನ್ನೂ ಬಿಡುಗಡೆಯಾಗಬೇಕಿರುವ ಆರ್ಭಟ ಚಿತ್ರದ ನಾಯಕ ರೂಪೇಶ್ ಅಂತೆ! ಈ ವಿಚಾರವನ್ನೆಲ್ಲ ಈ ನಿರ್ಮಾಪಕರಿಬ್ಬರು ಹಂಚಿಕೊಂಡಿದ್ದು ಆರ್ಭಟ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ.
ಒಟ್ಟಾರೆ ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಭಾಗ ಎರಡು ಮಾಡುವ ಟ್ರೆಂಡ್ ಶುರುವಾಗಿದೆ ಎನ್ನಲು ಅಡ್ಡಿಯಿಲ್ಲ ಬಿಡಿ.