ಎರಡನೇ ಮದುವೆಯ ಯಶಸ್ಸಿನಿಂದ ಉಬ್ಬಿ ಹೋಗಿರುವ ದಿನೇಶ್ ಬಾಬು ಇದೀಗ ಎರಡನೇ ಮದುವೆಯ ಎರಡನೇ ಭಾಗ ಮಾಡಲು ಹೊರಟಿದ್ದಾರೆ. ಅದೇ ಸುಹಾಸಿನಿ ಅನಂತನಾಗ್ ಜೋಡಿಯನ್ನೇ ಇಟ್ಟುಕೊಂಡು ಶೀಘ್ರದಲ್ಲೇ ಮತ್ತೊಂದು ಮದುವೆ ಮಾಡಲು ನಿಶ್ಚಯಿಸಿದ್ದಾರೆ. ಆದರೆ ಎರಡನೇ ಮದುವೆ ಭಾಗ 2 ಅಂತ ಹೆಸರಂತೂ ಇಡೋದಿಲ್ಲ. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮತ್ತೊಂದು ಮದುವೆನಾ? ಎಂಬ ಹೆಸರಿಡಲು ಪರವಾನಗಿ ಪಡೆದೂ ಆಗಿದೆ.
ಆದರೆ ಈ ಬಾರಿ ತಾರಾಗಣ ನಿರ್ದೇಶಕರು ಎಲ್ಲ ಮತ್ತೊಂದು ಮದುವೆನಾ? ದಲ್ಲೂ ಮುಂದುವರಿಸಿದರೂ, ನಿರ್ಮಾಪಕರು ಮಾತ್ರ ಬದಲಾಗಲಿದ್ದಾರೆ. ಅದಕ್ಕೆ ಕಾರಣ ದಿನೇಶ್ ಬಾಬು ಹಾಗೂ ನಿರ್ಮಾಪಕರಾದ ಸುರೇಶ್ ಹಾಗೂ ರಾಜೀವ್ ನಡುವಿನ ವೈಮನಸ್ಸು. ಇದೇ ಕಾರಣಕ್ಕೆ ದಿನೇಶ್ ಬಾಬು ಇದೀಗ ಉಮೇಶ್ ಬಣಕರ್ ಹಾಗೂ ಡಿ.ಕೆ.ರಾಮಕೃಷ್ಣ ಎಂಬ ಇಬ್ಬರು ಬೇರೆಯೇ ನಿರ್ಮಾಪಕರನ್ನು ಹುಡುಕಿಕೊಂಡೂ ಆಗಿದೆ.
ಈ ಮೊದಲೇ ನಿರ್ದೇಶಕ ದಿನೇಶ್ ಬಾಬು ಅವರಿಗೆ ಎರಡನೇ ಮದುವೆಯ ತೆಲುಗು ಅವತರಣಿಕೆಯ ಕುರಿತಾಗಿ ನಿರ್ಮಾಪಕ ಸುರೇಶ್ ಜೊತೆ ಕೊಂಚ ಅಸಮಾಧಾನ ಏರ್ಪಟ್ಟಿತ್ತು. ಇದೇ ಹಿನ್ನೆಲೆಯಲ್ಲಿ ಎರಡನೇ ಮದುವೆಯ ಯಶಸ್ಸಿನ ಕುರಿತಾಗಿ ಕರೆದ ಪತ್ರಿಕಾಗೋಷ್ಠಿಗೆ ನಿರ್ಮಾಪಕ ಸುರೇಶ್ ಈ ಎಲ್ಲ ಯಶಸ್ಸಿಗೆ ಕಾರಣಕರ್ತರಾದ ನಿರ್ದೇಶಕರನ್ನೇ ಕರೆದಿರಲಿಲ್ಲ. ಕಥೆಯೂ ಸೇರಿದಂತೆ ಚಿತ್ರದ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ದಿನೇಶ್ ಬಾಬು ಅವರನ್ನು ಆಮಂತ್ರಿಸದೆ ನಡೆಸಿದ ಈ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ನೇರವಾಗಿ ದಿನೇಶ್ ಬಾಬು ಅವರ ಗೈರುಹಾಜರಿಗೆ ಕಾರಣ ಕೇಳಿದಾಗ, ನಿರ್ಮಾಪಕ ಸುರೇಶ್, ದಿನೇಶ್ ಬೆಂಗಳೂರಲ್ಲಿಲ್ಲ.
ಅವರು ಮೈಸೂರಿಗೆ ಹೋಗಿದ್ದಾರೆ ಅದಕ್ಕಾಗಿ ಬಂದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದರು. ಆದರೆ ವಿಚಿತ್ರವೆಂದರೆ, ನನಗೆ ಅವರು ಆಮಂತ್ರಿಸಿಯೇ ಇಲ್ಲ. ನಾನು ಮೈಸೂರಿಗೆ ಹೋಗಿಯೇ ಇಲ್ಲ. ಇಲ್ಲೇ ಬೆಂಗಳೂರಲ್ಲೇ ಅವರ ಆಮಂತ್ರಣ ಬರುತ್ತೋ ಎಂದು ಕಾದು ಕುಳಿತಿದ್ದೆ. ಬರಲೇ ಇಲ್ಲ ಎನ್ನುತ್ತಾರೆ ದಿನೇಶ್.
ಒಟ್ಟಾರೆ ಇದೇ ಸಿಟ್ಟಿನಲ್ಲೋ ಏನೋ ದಿನೇಶ್ ಬಾಬು ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ. ಅದಕ್ಕಾಗಿಯೇ ಮತ್ತೆ ಅನಂತನಾಗ್, ಸುಹಾಸಿನಿ ಜೋಡಿಯನ್ನಿಟ್ಟು ಮದುವೆ ಮಾಡಲು ಹೊರಟಿದ್ದಾರೆ. ಮತ್ತೊಂದು ಮದುವೆನಾ? ದಲ್ಲಿ ಯಾರ್ಯಾರಿಗೆ ಮದುವೆಯಾಗುತ್ತೋ ಗೊತ್ತಿಲ್ಲ. ಒಟ್ಟಾರೆ ಕಾದು ನೋಡಬೇಕು.