ಇದುವರೆಗೂ ಕಿರುತೆರೆ, ಜಾಹೀರಾತುಗಳಿಗೆ ಅಭಿನಯ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡುತ್ತಾ ಬಂದಿದ್ದ ಮಾನಸ್ ಏಕಕಾಲಕ್ಕೆ ಚಿತ್ರ ನಿರ್ದೇಶಕ ಹಾಗೂ ನಟರಾಗಿ ಮಿಂಚಲು ಸಜ್ಜಾಗಿದ್ದಾರೆ.
ಹೌದು, ಇವರು ಕನ್ನಡದಲ್ಲೇ 'ಸ್ಯಾಂಡಲ್‌ವುಡ್ ಗುರು' ನಿರ್ದೇಶಿಸಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಪ್ರಮಾಣ ಪತ್ರ ಸಹ ನೀಡಿದೆ. ಸದ್ಯವೇ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ.
ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ನಿರ್ದೇಶಕರೇ ಬರೆದಿದ್ದಾರೆ. ಹಾಸ್ಯಕ್ಕೆ ಪ್ರತಿಯೊಬ್ಬರೂ ಮೊರೆ ಹೋಗುವವರ ನಡುವೆ ಈ ಚಿತ್ರ ಭಿನ್ನವಾಗಿದೆಯಂತೆ. ಏನೆಂದರೆ ಈ ಚಿತ್ರದಲ್ಲಿ ಹಾಸ್ಯ ಸನ್ನಿವೇಶಗಳೇ ಇಲ್ಲವಂತೆ. ಒಂದು ಮಾತು ಸಹ ನಗಿಸುವಂತದ್ದು ಇಲ್ಲ ಅಂದರೆ ಅದ್ಯಾವ ರೀತಿ ಚಿತ್ರ ಗಂಭೀರವಾಗಿದೆಯೋ ಊಹಿಸಿ.
ಬೆಂಗಳೂರು ಮೂವೀಸ್‌ನ ಸ್ಪೆನ್ಸರ್ ಮ್ಯಾಥ್ಯೂ ಹಾಗೂ ಗುಡ್ ಬೀ ಹನಿ ಪ್ರೊಡಕ್ಷನ್ ಚಂಪ ಕುಮಾರ್ ಚಿತ್ರದ ನಿರ್ಮಾಪಕರು. ಜೇಮ್ಸ್ ಆರ್ಕಿಟೆಕ್ ಸಂಗೀತ ನೀಡಿದ್ದಾರೆ. ಸಂತೋಷ್ ಛಾಯಾಗ್ರಹಣ, ಡಿ.ಜೆ. ಮಹೇಶ್ ಕುಮಾರ್ ಸಾಹಿತ್ಯವಿರುವ ಚಿತ್ರಕ್ಕೆ ನಾಯಕಿಯಾಗಿ ಹುಬ್ಬಳ್ಳಿ ಹುಡುಗಿ ಅಕ್ಷತಾ ಶೆಟ್ಟಿ ಇದ್ದಾರೆ. ಇವರ ಹೊರತಾಗಿ ನವ್ಯಾ, ಆಕಾಂಕ್ಷ, ಸಿ.ಆರ್. ರಮೇಶ್, ಸೌಜನ್ಯ ಮತ್ತಿತರರು ಇದ್ದಾರೆ.