ಶಿವಣ್ಣನ 100ನೇ ಚಿತ್ರ ಜೋಗಯ್ಯನಿಗೆ ಅದ್ಬುತ ಆರಂಭ ಅರಮನೆ ಮೈದಾನದಲ್ಲಿ ನೀಡಿದ್ದು ಗೊತ್ತಿದೆ. ಆದರೆ ಚಿತ್ರದ ಅಡಿ ಶೀರ್ಷಿಕೆಗೆ ವಿಘ್ನ ಕಾಡಿದೆ ಎನ್ನುವುದು ಲೇಟೆಸ್ಟ್ ನ್ಯೂಸ್.
ಹೌದು. ಪ್ರೇಮ್ ಅವರ ಅತ್ಯಂತ ಮಹತ್ವಾಕಾಂಕ್ಷೆಯ ಈ ಚಿತ್ರ ಅಡಿ ಶೀರ್ಷಿಕೆ ಕಳೆದುಕೊಳ್ಳುವ ಭಯ ಎದುರಿಸುತ್ತಿದೆ. 'ದಿ ಲೆಜೆಂಡ್ ಆಫ್ ಅಂಡರ್ ವರ್ಲ್ಡ್' ಅನ್ನುವ ಅಡಿ ಶೀರ್ಷಿಕೆ ಒಳಗೊಂಡಿರುವ ಈ ಚಿತ್ರ ಭೂಗತ ಜಗತ್ತಿನ ದೊರೆಯೊಬ್ಬ ಹೇಗೆ ದಂತಕಥೆಯಾಗುತ್ತಾನೆ ಎನ್ನುವುದುನ್ನು ತೋರಿಸುವುದು ಇದರ ಕಥೆಯಂತೆ. ಆದರೆ, ಸಮಸ್ಯೆ ಹುಟ್ಟಿರುವುದು ಇಲ್ಲಿ. ಭೂಗತ ಜಗತ್ತಿನ ದೊರೆ ಅಂದರೆ ಆತ ಪಾತಕಿ. ಇಂಥ ಪಾತಕಿಯನ್ನು ದಂತಕಥೆಯನ್ನಾಗಿ ಮಾಡೋದು, ದಂತಕಥೆಯಾಗಿ ಹೋಗೋದು ಎಷ್ಟು ಸರಿ ಎನ್ನುವ ಚರ್ಚೆ ಬುದ್ಧಿಜೀವಿಗಳಲ್ಲಿ ಆರಂಭವಾಗಿದೆ.
ಹೀಗಾಗಿ ಒಂದು ವಲಯದ ತೀವ್ರ ವಿರೋಧವೂ ಆರಂಭವಾಗಿದೆ. ಖ್ಯಾತ ವ್ಯಕ್ತಿಯನ್ನು ದಂತಕಥೆ ಅನ್ನಬಹುದು. ಕುಖ್ಯಾತ ವ್ಯಕ್ತಿಯನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ರೌಡಿಯನ್ನು ದಂತಕಥೆಯಾಗಿಸುವ ಚಿತ್ರವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.
ಈ ಕುರಿತು ಚರ್ಚೆಗೆ ಒಳಗಾಗಿರುವ ನಿರ್ದೇಶಕ ಪ್ರೇಮ್ ಹಾಗೂ ನಿರ್ಮಾಪಕಿ ರಕ್ಷಿತಾ ನಿರುತ್ತರರಾಗಿದ್ದು, 'ಅವರವರ ದಾರಿಯಲ್ಲಿ ಅವರು ದಂತಕಥೆಗಳೇ. ಅದೇ ರೀತಿ ಈ ರೌಡಿಯೂ ಸಹ' ಅಂತ ಹೇಳುವ ಮೂಲಕ ಸದ್ಯ ನುಣುಚಿಕೊಂಡಿದ್ದಾರೆ. ಆದರೆ ಚರ್ಚೆ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಇದೆ.
ಬುದ್ದಿಜೀವಿಗಳ ಮಾತೇ ಸರಿ ಎಂದು ಶಿವಣ್ಣ ಸಹ ಹೇಳಿದ್ದಾರೆ. ಏಕೆಂದರೆ ಭೂಗತ ಜಗತ್ತಿನ ದೊರೆಯನ್ನು ಲೆಜೆಂಡ್ ಆಗಿಸುವುದು ಸರಿಯಲ್ಲ. ಇವರನ್ನು ಹಾಗೆ ಕರೆಯುವುದರಿಂದ ಜೀವಂತ ದಂತಕತೆಗಳಿಗೆ ಅವಮಾನಿಸಿದಂತೆ ಎಂದಿದ್ದಾರೆ. ಇದಕ್ಕೆ ಬುದ್ದಿಜೀವಿಗಳು ನೀಡಿರುವ ಪರಿಹಾರವನ್ನೂ ಒಪ್ಪಿದ್ದಾರೆ. ಅದೇನೆಂದರೆ, ಜೋಗಯ್ಯ- ದಿ ಲೆಜೆಂಡ್. ಇದೇ ಹೆಸರು ಬರುವ ಸಾಧ್ಯತೆ ನಿಚ್ಚಳವಾಗುತ್ತಿದೆ.