ಸ್ಯಾಂಡಲ್ ವುಡ್ ಟಿ20 ಕ್ರಿಕೆಟ್ ಪಂದ್ಯಾವಳಿ ಡಾ.ರಾಜ್ ಕಪ್‌ಗೇನೋ ಭರ್ಜರಿ ಸಿದ್ಧತೆ ನಡೆದಿದ್ದು ಈಗಾಗಲೇ ತಂಡಗಳು ದಾವಣಗೆರೆಗೆ ಪ್ರಯಾಣ ಬೆಳೆಸಿವೆ. ಜು.23 (ಶುಕ್ರವಾರ)ರಂದು ಪಂದ್ಯಾವಳಿ ಆರಂಭವಾಗಲಿದೆ. ಆದರೆ ಈ ಪಂದ್ಯಾವಳಿಗೆ ಆರಂಭಕ್ಕೂ ಮುನ್ನವೇ ವಿಘ್ನ ವಕ್ಕರಿಸಿಕೊಂಡಿದೆ. ನೃತ್ಯ ಕಲಾವಿದರ ಸಹಾಯಾರ್ಥ ಈ ಪಂದ್ಯಾವಳಿ ನಡೆಯುತ್ತಿರುವುದರಿಂದ ಕಲಾವಿದರಲ್ಲೇ ಬಿರುಕು ಮೂಡಿದ್ದು, ಈ ಹಿನ್ನೆಲೆಯಲ್ಲಿ ಕೆಲವು ನಟರು ಆಡದಿರುವುದೇ ಕ್ಷೇಮ ಎಂಬ ನಿರ್ಧಾರಕ್ಕೆ ಬಂದು ಪಂದ್ಯದಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.
ನೃತ್ಯ ಕಲಾವಿದರ ಸಹಾಯಾರ್ಥ ಈ ಪಂದ್ಯ ನಡೆಯುತ್ತಿದ್ದು, ಇದಕ್ಕೆ ಇತರ ಕೆಲವು ಕಲಾವಿದರು ಈ ಹಿಂದೆಯೇ ಅಪಸ್ವರವೆತ್ತಿದ್ದರು. ಜೊತೆಗೆ ಕಲಾವಿದರೊಳಗೇ ಈ ಹಿನ್ನೆಲೆಯಲ್ಲಿ ಹಲವು ಸಂದೇಶಗಳು ರವಾನೆಯಾಗುತ್ತಿದ್ದು, ಈ ಪಂದ್ಯದಲ್ಲಿ ಭಾಗವಹಿಸಬೇಡಿ ಎಂದು ಕಲಾವಿದರ ಸಂಘ ಫರ್ಮಾನು ಹೊರಡಿಸಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವರು ಕಲಾವಿದರ ಸಂಘದ ಮಾತಿಗೆ ಓಗೊಟ್ಟು ಈ ಪಂದ್ಯಾವಳಿಯಿಂದಲೇ ಹಿಂದೆ ಸರಿದಿದ್ದಾರೆ. ದರ್ಶನ್, ದುನಿಯಾ ವಿಜಯ್ ಕೂಡಾ ಪಂದ್ಯದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
MOKSHA
ದುನಿಯಾ ವಿಜಯ್ ಕೆಲ ಅಭ್ಯಾಸ ಪಂದ್ಯಗಳಿಗೆ ಹಾಜರಾಗಿದ್ದರೂ, ನಂತರದ ದಿನಗಳಲ್ಲಿ ಅಭ್ಯಾಸದಿಂದ ತಪ್ಪಿಸಿಕೊಂಡಿದ್ದರು. ಕಲಾವಿದರ ಸಂಘದ ಪತ್ರಕ್ಕೆ ಓಗೊಟ್ಟು ಪಂದ್ಯದಿಂದ ಹಿಂದೆಯೇ ಉಳಿದಿದ್ದಾರೆ ಎನ್ನಲಾಗುತ್ತಿದೆ.
ಆದರೆ ಕೆಲ ಕಲಾವಿದರು ಕಲಾವಿದರ ಸಂಘದ ಮಾತಿಗೆ ಕಿವಿಗೊಡದೆ ಕ್ರಿಕೆಟ್ ಆಡಲು ತೆರಳಿದ್ದಾರೆ. ಉಪೇಂದ್ರ, ಸುದೀಪ್, ಶಿವರಾಜ್ ಕುಮಾರ್, ರವಿಚಂದ್ರನ್, ಲೂಸ್ ಮಾದ ಯೋಗೀಶ್, ಚೇತನ್, ಚಿರಂಜೀವಿ ಸರ್ಜಾ ಮತ್ತಿತರರು ಅಭ್ಯಾಸಗಳಲ್ಲಿ ಪಾಲ್ಗೊಂಡು ಇದೀಗ ಆಡಲು ತೆರಳಿದ್ದಾರೆ. ಒಟ್ಟಾರೆ ಇದೀಗ ಎಲ್ಲರ ಕಣ್ಣು ರಾಜ್ ಕಪ್‌ನತ್ತ ತಿರುಗಿದೆ.
ಪಾರ್ವತಮ್ಮ ರಾಜ್ ಕುಮಾರ್ ಈ ಬಗ್ಗೆ ಮಾತನಾಡುತ್ತಾ, ಕಲಾವಿದರ ಒಳಿತಿಗಾಗಿ ಸಹಾಯಾರ್ಥವಾಗಿ ಈ ಪಂದ್ಯ ನಡೆಸುತ್ತಿದ್ದೇವೆ. ಅದಕ್ಕಾಗಿ ಚಿತ್ರರಂಗವೇ ಒಗ್ಗಟ್ಟಾಗಿ ಆಡುತ್ತಿದ್ದಾರೆ. ನಮ್ಮ ಯಜಮಾನರ ಹೆಸರಿನಲ್ಲಿ ಈ ಪಂದ್ಯಾವಳಿ ನಡೆಸುತ್ತಿದ್ದಾರೆ. ಎಲ್ಲರಿಗೂ ಒಳ್ಳೆಯದಾಗಲಿ. ಈ ಮೂಲಕವಾದರೂ ಕಲಾವಿದರಿಗೆ ಒಳ್ಳೆಯದಾಗಲಿ ಎಂದರು.