ಅಶೋಕ್ ಕಶ್ಯಪ್ ಮುಖದಲ್ಲಿ ಮತ್ತೆ ನಗು ಮೂಡಿದೆ. ಹಲವು ವರ್ಷಗಳ ನಂತರ ಅವರು ತುಂಬು ಪ್ರೀತಿ ಇಟ್ಟು ನಿರ್ದೇಶಿಸಿದ 'ಲಿಫ್ಟ್ ಕೊಡ್ಲಾ' ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ.
ಜಗ್ಗೇಶ್ ವೃತ್ತಿ ಬದುಕಿಗೆ ಹೊಸ ರೀತಿಯ ತಿರುವು ನೀಡುವ ಮೂಲಕವೂ ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಾವಿಗಿಂತ ಬದುಕು ಹೇಗೆ ಮುಖ್ಯ ಎನ್ನುವುದನ್ನು ಸರಳವಾಗಿ ಮತ್ತು ಮನ ಮುಟ್ಟುವಂತೆ ನಿರೂಪಿಸಿದೆ. ಅದೇ ಈ ಚಿತ್ರದ ಗೆಲುವಿಗೆ ಕಾರಣ ಅಂತಾರೆ ಜಗ್ಗೇಶ್.
ಮಾಮೂಲಿ ಜಗ್ಗೇಶ್ ಅವರನ್ನು ನೆನಪಿನಲ್ಲಿ ಇಟ್ಟುಕೊಂಡು ನೀವು ಥಿಯೇಟರ್ ಒಳಗೆ ಹೋದರೆ ಅದು ಸಿಗುವುದಿಲ್ಲ. ಬದಲಿಗೆ ಹೊಸ ಜಗ್ಗೇಶ್ ಅಭಿನಯವನ್ನು ನೀವು ನೋಡುತ್ತೀರಿ. ಆದರೂ ಇದನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ ಅಂದರೆ ಚಿತ್ರಕತೆಯ ಗಟ್ಟಿತನದ ಅರಿವಾಗುತ್ತದೆ.
ಅದೇನೆ ಇರಲಿ, ಇತ್ತೀಚೆಗೆ ಕನ್ನಡ ಚಿತ್ರಗಳು ಒಂದರ ಹಿಂದೊಂದು ಸೋಲುತ್ತಿದ್ದವು. ಅದನ್ನೆಲ್ಲ ಮರೆಸುವಂತೆ ಕೆಲವು ತಿಂಗಳಲ್ಲಿ ಕೆಲವು ಚಿತ್ರಗಳು ಹಿಟ್ ಆಗಿದ್ದವು. ಆ ಸಾಲಿಗೆ ಈಗ ಲಿಫ್ಟ್ ಕೊಡ್ಲಾ ಚಿತ್ರವೂ ಸೇರಿದೆ. ಅಲ್ಲಿಗೆ ಹೊಸ ಪ್ರಯತ್ನಗಳನ್ನು ಜನರು ಒಪ್ಪಿಕೊಳ್ಳುತ್ತಾರೆ ಎಂಬುದು ಸಾಬೀತಾಗಿದೆ.
ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಇಂಥ ಚಿತ್ರಗಳು ಬರಲಿ. ಹಾಗೇ ಅಶೋಕ್ ಕಶ್ಯಪ್ ಇನ್ನಷ್ಟು ಸಾಮಾಜಿಕ ಸಂದೇಶ ಬೀರುವ ಚಿತ್ರಗಳನ್ನು ಕೊಡಲಿ ಎನ್ನುವುದು ಎಲ್ಲರ ಆಶಯ.