ಎರಡನೇ ಮದುವೆ ಹಿಟ್ ಆದ ನಂತರ ಕೆಲ ಹೊಸ ಸುದ್ದಿಗಳು ಕೇಳಿ ಬರುತ್ತಿವೆ. ಅದೇನೆಂದರೆ ಚಿತ್ರ ನಿರ್ಮಾಣಗೊಂಡಾಗ ಅಷ್ಟು ಚೆನ್ನಾಗಿ ಇರಲಿಲ್ಲವಂತೆ, ನಿರ್ಮಾಪಕರು ನಂತರ ಅದಕ್ಕೆ ಒಂದಿಷ್ಟು ರಿಪೇರಿ ಮಾಡಿದರಂತೆ. ಅದರಿಂದಲೇ ಚಿತ್ರ ಗೆದ್ದಿದೆ ಎಂಬ ಮಾತು ಈಗ ಕೇಳಿ ಬರುತ್ತಿದೆ.
ಕನ್ನಡದ ಸ್ಥಿತಿಯೇ ಇಷ್ಟು. ಚಿತ್ರವೊಂದು ಗೆದ್ದಿದೆ ಅಂದರೆ ಒಟ್ಟಾರೆ ಪ್ರಯತ್ನ ಎಂದು ಯಾರೂ ಒಪ್ಪಿಕೊಳ್ಳುವುದಿಲ್ಲ. ತಮಗೆ ಮೈಕ್ ಸಿಕ್ಕಲ್ಲೆಲ್ಲಾ ಗೆಲ್ಲಲು ತಾನು ಕಾರಣ ಅಂತ ಹೇಳುತ್ತಾರೆ. ಇದೇ ಕಥೆ ನಿರ್ಮಾಪಕರೂ ಆಡುತ್ತಿದ್ದಾರೆ.
ಅದೇನೆ ಇರಲಿ, ಜನರು ಮಾತ್ರ ಚಿತ್ರವನ್ನು ಒಪ್ಪಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಆರ್ ಅಶೋಕ್ ಚಿತ್ರವನ್ನು ವೀಕ್ಷಿಸಿ ಹ್ಹಹ್ಹಹ್ಹಾ ಎಂದು ನಕ್ಕಿದ್ದಾರೆ. ಹೀಗೆ ದಿನದಿಂದ ದಿನಕ್ಕೆ ಇದು ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಹಾಗಿದ್ದ ಮೇಲೆ ವಿವಾದದಿಂದ ದೂರ ಉಳಿಯಲು ಸಾಧ್ಯವೇ? ಈಗ ಖ್ಯಾತೆ ತೆಗೆದು ಕ್ರೆಡಿಟ್ ಪಡೆಯಲು ಹೊರಟವರು ನಿರ್ಮಾಪಕ ಸುರೇಶ್. ಚಿತ್ರದ ನಿರ್ದೇಶಕ ದಿನೇಶ್ ಬಾಬು ಮತ್ತು ನಿರ್ಮಾಪಕ ಸುರೇಶ್ ನಡುವೆ ಚಿಕ್ಕದೊಂದು ಜಟಾಪಟಿ ನಡೆದಿದೆ. ತೆಲುಗು ರಿಮೇಕಿನ ಹಕ್ಕಿನ ಕುರಿತು ನಿರ್ದೇಶಕ ದಿನೇಶ್ ಬಾಬು ಹಾಗೂ ನಿರ್ಮಾಪಕ ಸುರೇಶ್ ನಡುವೆ ಮೊದಲೇ ಅಷ್ಟಕ್ಕಷ್ಟೇ ಎಂಬಂಥ ಸಂಬಂಧ ಬಹಿರಂಗವಾಗದೆ ಉಳಿದಿಲ್ಲ. ಅವೆಲ್ಲವುಗಳ ಜೊತೆಗೆ, ಈಗ ಮತ್ತೊಂದು ಇಂಟರೆಸ್ಟಿಂಗ್ ವಿಚಾರವೊಂದಿದೆ.
ನಿರ್ದೇಶಕ ದಿನೇಶ್ ಬಾಬು ಮೊದಲು ಪೂರ್ತಿ ಚಿತ್ರವನ್ನು ಮುಗಿಸಿಕೊಟ್ಟಿದ್ದರಂತೆ. ಆದರೆ ದ್ವಿತಿಯಾರ್ಧವನ್ನು ನೋಡಿದ ಸುರೇಶ್ ಇದನ್ನು ಖಂಡಿತ ಜನರು ಮೆಚ್ಚುವುದಿಲ್ಲ ಎಂದು ಗುರುಪ್ರಸಾದ್ ಮೊರೆ ಹೋದರಂತೆ. ಗುರು ತಮ್ಮ ಶ್ರಮ ವಹಿಸಿ ಎಲ್ಲೆಲ್ಲಿ ಹಾಸ್ಯ ಮಿಸ್ ಆಗಿತ್ತೊ ಅಲ್ಲಲ್ಲಿ ಕೈ ಆಡಿಸಿದರು. ಕೆಲವು ದೃಶ್ಯಗಳನ್ನು ಚೇಂಜ್ ಮಾಡಿದರು. ಕೊನೆಗೆ ಕೆಲವಕ್ಕೆ ಮು ಚಿತ್ರೀಕರಣ ಮಾಡಿದರಂತೆ. ಆಗ ಅದು ನೋಡೆಬಲ್ ಆಯಿತು. ಅದಕ್ಕೆ ಸಿನಿಮಾ ಗೆದ್ದಿತು ಅನ್ನೋದು ನಿರ್ಮಾಪಕ ಸುರೇಶ್ ಅವರ ವಾದ. ಅವರು ಹೇಳಿದ್ದು ನಿಜವೇ ಇರಬಹುದು. ಆದರೆ ಅಕಸ್ಮಾತ್ ಈ ಚಿತ್ರ ಸೋತಿದ್ದರೆ ಅದಕ್ಕೆ ಇವರು ಗುರುವನ್ನು ಹೊಣೆ ಮಾಡದೇ ಇರುತ್ತಿದ್ದರೇ? ಒಟ್ಟಾರೆ ಸಿನಿಮಾ ಗೆದ್ದರೆ ಇಂಥದ್ದೆಲ್ಲಾ ಸಾಮಾನ್ಯ ಎನ್ನದೆ ವಿಧಿಯಿಲ್ಲ.