ಅಪಮಾನ ತಾಳಲಾರದೆ ದಿಗ್ಗನೆದ್ದಿದ್ದ ಕನ್ನಡ ಚಿತ್ರರಂಗಕ್ಕೆ ರಿಲಯೆನ್ಸ್ ಸಮೂಹದ 'ಬಿಗ್ ಎಫ್ಎಂ 92.7' ಶರಣೆಂದಿದೆ. ಮಾಡಿದ ಅಪಮಾನಕ್ಕಾಗಿ ಕ್ಷಮಿಸಿ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ನಡೆಸಲು ಉದ್ದೇಶಿಸಿದ್ದ ಚಿತ್ರೋದ್ಯಮ ಬಂದ್ ಕರೆಯನ್ನು ರದ್ದುಪಡಿಸಲಾಗಿದೆ.
ಕನ್ನಡ ಚಿತ್ರರಂಗದ ಬಗ್ಗೆ ಅಪಮಾನಕಾರಿ ಪದಗಳನ್ನು ಬಳಸಿದ ಆರೋಪದ ಕುರಿತು ಭಾನುವಾರ ಬೆಂಗಳೂರಿನ ಫಿಲಂ ಛೇಂಬರಿನಲ್ಲಿ ನಡೆದ ಸಭೆಯಲ್ಲಿ ಬಹಿರಂಗವಾಗಿ 'ಬಿಗ್ ಎಫ್ಎಂ 92.7' ಕ್ಷಮೆ ಯಾಚಿಸಿದೆ. ಅಲ್ಲದೆ ಚಿತ್ರರಂಗ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವುದಾಗಿ ಭರವಸೆ ನೀಡಿದೆ.
ಎಫ್ಎಂ ಒಂದು ದಿನ ಬಂದ್... ಕೇವಲ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮೆ ಯಾಚಿಸುವುದು ಮಾತ್ರವಲ್ಲ, ಸೋಮವಾರದ ಎಲ್ಲಾ ಪ್ರಮುಖ ಕನ್ನಡ ದಿನಪತ್ರಿಕೆಗಳಲ್ಲಿ ಕ್ಷಮೆ ಯಾಚಿಸಬೇಕು. ಅಲ್ಲದೆ ಒಂದು ದಿನದ ಮಟ್ಟಿಗೆ 'ಬಿಗ್ ಎಫ್ಎಂ 92.7' ಚಾನೆಲನ್ನು ಸ್ಥಗಿತಗೊಳಿಸಬೇಕು ಎಂಬ ಕನ್ನಡ ಚಿತ್ರರಂಗದ ಬೇಡಿಕೆಗೂ ಸಂಸ್ಥೆ ಒಪ್ಪಿಕೊಂಡಿದೆ.
ಇವಿಷ್ಟೇ ಅಲ್ಲ, ಅಪಮಾನಕಾರಿ ಕಾರ್ಯಕ್ರಮದ ರೇಡಿಯೋ ಜಾಕಿ ರೋಹಿತ್ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತರ ನಿರೂಪಕರನ್ನು ಕೆಲಸದಿಂದ ಅಮಾನತು ಮಾಡಬೇಕು. ಇಂದಿನಿಂದ 15 ದಿನಗಳ ಕಾಲ ಪ್ರತಿ ಅರ್ಧಗಂಟೆಗೊಮ್ಮೆ ಎಫ್ಎಂನಲ್ಲಿ ಕನ್ನಡ ಚಿತ್ರರಂಗದ ಕ್ಷಮೆ ಯಾಚಿಸಬೇಕು ಎಂದು ಖಾಸಗಿ ಎಫ್ಎಂಗೆ ತಾಕೀತು ಮಾಡಲಾಗಿದೆ.
ರೇಡಿಯೋ ಜಾಕಿಯನ್ನು ಈಗಾಗಲೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ.
ಚಿತ್ರೋದ್ಯಮ ಬಂದ್ ರದ್ದು... ಖಾಸಗಿ ಎಫ್ಎಂ ಚಾನೆಲ್ ಕನ್ನಡ ಚಿತ್ರರಂಗದ ಬಗ್ಗೆ ಅವಹೇಳನಕಾರಿಯಾಗಿ ಕಾರ್ಯಕ್ರಮವನ್ನು ಬಿತ್ತರಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಶನಿವಾರ ಫಿಲಂ ಚೇಂಬರಿನಲ್ಲಿ ಸಭೆ ನಡೆದಿತ್ತು.
ಎಫ್ಎಂ ಚಾನೆಲ್ ಉದ್ಧಟತನದ ಧೋರಣೆಯನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಸೋಮವಾರ ಚಿತ್ರೋದ್ಯಮ ಬಂದ್ ಮಾಡುವ ನಿರ್ಧಾರಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅಂಬರೀಷ್, ಯೋಗರಾಜ್ ಭಟ್, ಪ್ರೇಮ್, ಜಯಂತಿ, ಅನುಪ್ರಭಾಕರ್, ನಾಗಶೇಖರ್, ರವಿ ಶ್ರೀವತ್ಸಾ, ಗಣೇಶ್, ಸುದೀಪ್, ಕೋಮಲ್, ಬುಲೆಟ್ ಪ್ರಕಾಶ್ ಸೇರಿದಂತೆ ಪ್ರಮುಖ ಕಲಾವಿದ-ನಿರ್ದೇಶಕರು ಭಾಗವಹಿಸಿದ್ದರು.
ಭಾನುವಾರ ನಡೆದ ಸಭೆಗೆ ಖಾಸಗಿ ಎಫ್ಎಂ ಸಂಸ್ಥೆಯ ಪ್ರತಿನಿಧಿಗಳೂ ಆಗಮಿಸಿದ್ದರು. ಈ ಸಂದರ್ಭದಲ್ಲಿ ನಡೆದ ಸಂಧಾನ ಮಾತುಕತೆಯಲ್ಲಿ ಎಫ್ಎಂ ಬೇಷರತ್ ಕ್ಷಮೆ ಕೇಳಿತು. ಅಲ್ಲದೆ ಕನ್ನಡ ಚಿತ್ರರಂಗ ಮುಂದಿಡುವ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವುದಾಗಿ ಭರವಸೆ ನೀಡಿತು. ಹಾಗಾಗಿ ಚಿತ್ರ ಪ್ರದರ್ಶನ ಮತ್ತು ಚಿತ್ರೋದ್ಯಮ ಬಂದ್ ಕರೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ವರದಿಗಳು ಹೇಳಿವೆ.