ನಾರದ ವಿಜಯ ಚಿತ್ರಕ್ಕೆ ಸೆನ್ಸಾರ್ ಒಪ್ಪಿಗೆ ಸಿಕ್ಕಿದೆ. ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸಿ 'ಯು' ಪ್ರಮಾಣಪತ್ರ ನೀಡಿದೆ. ಇದರಿಂದ ಚಿತ್ರದ ಬಿಡುಗಡೆಗೆ ಹಸಿರು ನಿಶಾನೆ ಸಿಕ್ಕಂತಾಗಿದ್ದು, ಶೀಘ್ರವೇ ಮತ್ತೊಂದು ಹಾಸ್ಯ ಚಿತ್ರವನ್ನು ತೆರೆ ಮೇಲೆ ವೀಕ್ಷಿಸುವ ಅವಕಾಶ ಒದಗಿ ಬಂದಿದೆ.
ಸಿಮ್ರಾನ್ ಮೂವಿ ಮೇಕರ್ಸ್ ಸಂಸ್ಥೆ ಚಿತ್ರವನ್ನು ತಯಾರಿಸಿದೆ. ಶಶಿಕುಮಾರ್ ವಿಶೇಷ ಪಾತ್ರದಲ್ಲಿ ಮಿಂಚಿದ್ದು, ಇವರ ಬಹುದಿನದ ಗೆಲುವಿನ ಕನಸು ನನಸಾಗುವ ಸಾಧ್ಯತೆ ಈ ಚಿತ್ರದಲ್ಲಾದರೂ ಒದಗಿ ಬರುತ್ತದೆಯಾ ಅಂತ ಕಾದು ನೋಡಬೇಕು.
ಹಾಗಂತ ಇವರು ಚಿತ್ರದ ನಾಯಕನಲ್ಲ. ಬದಲಾಗಿ ನಾರದನ ಪಾತ್ರಧಾರಿ. ಹಿಂದೆ ಅನಂತ್ನಾಗ್ ನಾರದನಾಗಿ ಮಿಂಚಿದ್ದರು, ಈಗ ಶಶಿಕುಮಾರ್ಗೆ ಆ ಅವಕಾಶ ಒದಗಿಬಂದಿದೆ. ನಾಯಕನಾಗಿ ಸೂರ್ಯ ನಟಿಸಿದ್ದಾರೆ. ಮಧ್ಯಮವರ್ಗದ ಜನರ ನಿತ್ಯ ಜೀವನ ಪ್ರಸಂಗವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ಮಂಜು ದೈವಜ್ಞ ಚಿತ್ರದ ನಿರ್ದೇಶಕರು. ಇವರೇ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ.
ಭಾಸ್ಕರ್ ರಾವ್ ಸಂಗೀತ ನೀಡಿದ್ದು, ಶಿವಕುಮಾರ್ ಕ್ಯಾಮರಾ ಕೈಚಳಕ ಮೆರೆದಿದ್ದಾರೆ. ಒಟ್ಟಾರೆ ಚಿತ್ರ ಸದ್ಯವೇ ಬಿಡುಗಡೆಯಗಲಿದ್ದು, ಪ್ರೇಕ್ಷಕರು ನಾರದನಿಗೆ ಉತ್ತರ ನೀಡಲಿದ್ದಾರೆ.