ದೇವರು ಕೊಟ್ಟ ತಂಗಿ ಚಿತ್ರ ಮಾಡಿ ಸೋತು ಸುಣ್ಣವಾಗಿದ್ದ, ಬದುಕುವ ಆಸೆಯನ್ನೇ ಕಳೆದುಕೊಂಡಿದ್ದ ನಿರ್ದೇಶಕ ಕಂ ನಿರ್ಮಾಪಕ ಓಂ ಸಾಯಿ ಪ್ರಕಾಶ್ ಅವರೀಗ ಕೊಂಚ ಚಿಗುರಿದ್ದಾರೆ. ಅವರೀಗೀಗ ಕೊಂಚ ಶಕ್ತಿ ಬಂದಿದೆ.
ಹೌದು, ಇವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ಹೆಸರು ಶ್ರೀನಾಗಶಕ್ತಿ. ಇದು ಇವರ ಫೇವರೆಟ್ ವಿಷಯ ಕೂಡ ಹೌದಂತೆ. ಗ್ರಾಮದೇವತೆ, ನಾಗದೇವತೆ ನಂತರ ಇದು ಮುಂದಿನ ಧಾರ್ಮಿಕ ಪ್ರಧಾನ ಚಿತ್ರವಾಗಿ ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರವಾಗಿದೆ.
MOKSHA
ಹಾವಿನ ಜನ್ಮಾಂತರದ ಸಂಬಂಧ ಈ ಚಿತ್ರದ ವಿಷಯ ವಸ್ತುವಂತೆ. ನಾಗ ಸಂಬಂಧ ಮಾನವ ಜನ್ಮದಲ್ಲಿ ಯಾವ ವಿಧದ ಪರಿಣಾಮ ಬೀರಲಿದೆ ಎನ್ನುವುದೇ ಚಿತ್ರದ ಮೂಲ ವಿಷಯವಂತೆ. ಕಥೆ, ಚಿತ್ರಕಥೆ ಹಾಗೂ ನಿರ್ದೇಶನವನ್ನು ಸಾಯಿಪ್ರಕಾಶ್ ಅವರೇ ಮಾಡಲಿದ್ದು, ಸಂಭಾಷಣೆ ಹಾಗೂ ಗೀತರಚನೆಯನ್ನು ಗೋಟೂರಿ ಅವರಿಗೆ ವಹಿಸಿದ್ದಾರಂತೆ. ಸಿ. ನಾರಾಯಣ್ ಛಾಯಾಗ್ರಹಣ ಚಿತ್ರಕ್ಕೆ ಲಭಿಸಿದೆ. ಗಣೇಶ್ ನಾರಾಯಣ್ ಸಂಗೀತ, ಕೌರವ ವೆಂಕಟೇಶ್ ಸಾಹಸ ಸಂಯೋಜಿಸಿದ್ದಾರೆ. ಆಗಸ್ಟ್ 5ರಿಂದ ಚಿತ್ರೀಕರಣವೂ ಆರಂಭವಾಗಲಿದೆ.
MOKSHA
ರಾಮ್ ಕುಮಾರ್ ಹಾಗೂ ಶ್ರುತಿ ಚಿತ್ರದ ನಾಯಕ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ಶಿವಕುಮಾರ್, ರಮೇಶ್ ಭಟ್, ಸಂಗೀತ, ಟೆನ್ನಿಸ್ ಕೃಷ್ಣ, ಗೋಟೂರಿ, ಮೋಹನ್ ಜುನೇಜಾ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಸಾಯಿ ಪ್ರಕಾಶ್‌ರ ಗೋಲ್ಮಾಲ್ ರಾಧಾಕೃಷ್ಣ ಮತ್ತಿತರ ಚಿತ್ರದಲ್ಲಿ ನಟಿಸಿದ್ದ ನಟಿ ಕೆ.ಜೆ. ಭಾರತಿ ಈ ಚಿತ್ರದ ನಿರ್ಮಾಪಕರು.
ಹಾಂ, ಅಂದಹಾಗೆ, ಈ ಚಿತ್ರದಲ್ಲಿ ಶ್ರುತಿ ನಾಗಿಣಿಯಂತೆ! ಬಹಳ ಕಾಲದ ನಂತರ ಬರುತ್ತಿರುವ ಶ್ರುತಿ ರಾಮ್ ಕುಮಾರ್ ಹಾಗೂ ಶ್ರುತಿ ಜೋಡಿ ತೆರೆಯ ಮೇಲೆ ನೋಡುವ ಸರದಿ ವೀಕ್ಷಕರದ್ದು. ಈ ಚಿತ್ರವಾದರೂ ಸಾಯಿ ಪ್ರಕಾಶ್ ಕೈಹಿಡಿಯುತ್ತಾ ನೋಡಬೇಕು.