ವಿಚಿತ್ರ ಹಾಗೂ ವಿಭಿನ್ನ ಹೆಸರಿನಿಂದ ಜನರನ್ನು ಸೆಳೆಯುವ ಕಾರ್ಯ ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ಬೆಳೆದು ಬಂದಿದೆ. ಆಗಾಗ ಚಿತ್ರ- ವಿಚಿತ್ರ ಹೆಸರಿನ ಮೂಲಕ ಆ ಖ್ಯಾತಿಯನ್ನು ತೋರ್ಪಡಿಸುತ್ತಲೂ ಇದೆ ಚಿತ್ರರಂಗ. ಇದಕ್ಕೆ ಹೊಸ ಸೇರ್ಪಡೆ 'ಇದ್ರೆ ಗೋಪಿ ಬಿದ್ರೆ ಪಾಪಿ'.
ಕೆ.ಎನ್. ನರಸಿಂಹರಾಜು ನಿರ್ಮಾಣದ ಈ ಚಿತ್ರವನ್ನು ಜಿ.ವಿ. ರಾಮರಾವ್ ನಿರ್ದೇಶಿಸಿದ್ದಾರೆ. ಇದರ ಜತೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯೂ ಇವರ ಹೆಗಲೇರಿದೆ. ಜಗದೀಶ್ ಎಂಬುವರು ಚಿತ್ರದ ನಾಯಕರು. ಹೆಸರೇ ಹೇಳುವಂತೆ ಇದೊಂದು ಹಾಸ್ಯ ಪ್ರಧಾನ ಚಿತ್ರ.
ನಗುವಿಗೆ ಚಿತ್ರದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಏಕೆಂದರೆ, ಜನಪ್ರಿಯ ನಟಿ ಉಮಾಶ್ರೀ ಈ ಚಿತ್ರದಲ್ಲಿ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಇಷ್ಟಾದ ಮೇಲೆ ಚಿತ್ರದಲ್ಲಿ ನಗುವಿಗೆ ಕೊರತೆ ಆಗಲು ಸಾಧ್ಯವೇ? ಜನರನ್ನು ಚಿತ್ರಮಂದಿರಕ್ಕೆ ಸೆಳೆಯಲು ಉಮಾಶ್ರೀ ಒಬ್ಬರು ಸಾಕು ಎನ್ನುತ್ತಾರೆ ನಿರ್ದೇಶಕರು.
ಇದಲ್ಲದೇ ಚಿತ್ರದಲ್ಲಿ ದೊಡ್ಡಣ್ಣ, ರಮೇಶ್ ಭಟ್, ಬ್ಯಾಂಕ್ ಜನಾರ್ದನ್ ಹಾಗೂ ಮತ್ತಿತರ ಹಲವು ಕಲಾವಿದರು ನಟಿಸಲಿದ್ದಾರಂತೆ. ಚಿತ್ರ ಜುಲೈ 30ಕ್ಕೆ ಬಿಡುಗಡೆಯೂ ಆಗಿದ್ದು, ಜನರ ಮೆಚ್ಚುಗೆ ಪಡೆಯಲಿದೆ ಎಂಬ ಆಶಯ ನಿರ್ದೇಶಕರದ್ದು. ಸಾಧ್ಯವಾದರೆ ನೀವೂ ಹೋಗಿಬನ್ನಿ.