ಬಾಲಿವುಡ್ ನಟಿಯರಿಗಿಂತ ನಾನೇನು ಕಡಿಮೆ ಎನ್ನುವಂತೆ ತುಂಡು ಲಂಗ ಉಟ್ಟು ಮಾದಕ ಭಂಗಿಗಳಲ್ಲಿ ಗಂಡ ಹೆಂಡತಿ ಚಿತ್ರದಲ್ಲಿ ಮೈಚಳಿ ಬಿಟ್ಟು ನಟಿಸಿ ಪಡ್ಡೆ ಹೈಕಳ ಮೈಬಿಸಿಯೇರಿಸಿದ್ದ ಸ್ಯಾಂಡಲ್‌ವುಡ್ಡಿಗೆ ಸ್ಯಾಂಡಲ್‌ವುಡ್ಡನ್ನೇ ಹುಬ್ಬೇರಿಸುವಂತೆ ಮಾಡಿದ್ದ ನಟಿ ಸಂಜನಾ ಈಗ ಸಂಪೂರ್ಣ ಚೇಂಜ್ ಆಗಿದ್ದಾರೆ. ಅದರ ಫಲವೇ ತುಂಡು ಲಂಗದ ಬದಲು ಅವರ ಮೈಯ್ಯನ್ನು ಸೀರೆ ಆವರಿಸಿದೆ.
ಹೌದು. ಕೇವಲ ಹೆಸರು ಮಾಡಿ, ಕೈಗೆ ಚಿಪ್ಪು ಹಿಡಿಸಿದ್ದ ಗಂಡ ಹೆಂಡತಿ ಚಿತ್ರ ಕೇವಲ ಒಂದು ವರ್ಗದ ಪ್ರೇಕ್ಷಕರನ್ನು ಮಾತ್ರ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕೇವಲ ಪಡ್ಡೆ ಹೈಕಳು ಮಾತ್ರ ಇವರ ದೇಹಸಿರಿ ನೋಡಿ ಪಕ್ಕಾ ಮನರಂಜನೆ ಪಡೆದಿದ್ದರು. ಚಿತ್ರ ಬಿಡುಗಡೆ ಆದದ್ದೇ ಬಂತು, ನಂತರ ಇವರನ್ನು ಕ್ಯಾರೇ ಅನ್ನುವವರು ಇರಲಿಲ್ಲ. ಚಿತ್ರದಲ್ಲಿ ನಟಿಸುವ ಎಲ್ಲಾ ಅರ್ಹತೆ ಇದ್ದರೂ ಅವಕಾಶ ಸಿಕ್ಕಿರಲಿಲ್ಲ. ಈ ನಡುವೆ ಈ ಸಂಜೆ ಚಿತ್ರದಲ್ಲಿ ನಟಿಸಿದ್ದರೂ ಕೂಡಾ ಆ ಚಿತ್ರ ಇನ್ನೂ ಬಿಡುಗಡೆಯ ಭಾಗ್ಯ ಕಂಡಿಲ್ಲ.
ಇದೀಗ ರಂಗಪ್ಪ ಹೋಗ್ಬಿಟ್ನಾ? ಎಂಬ ಹಾಸ್ಯ ಚಿತ್ರದಲ್ಲಿ ಅವರು ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಬಿಕಿನಿಯಲ್ಲಿ ಮಾತ್ರವಲ್ಲ, ಸೀರೆಯಲ್ಲೂ ಚೆನ್ನಾಗಿ ಕಾಣಿಸುತ್ತೇನೆ ಎನ್ನುವುದನ್ನು ಸಾಬೀತು ಪಡಿಸಲು ಇವರಿಗೆ ಒಂದು ಅವಕಾಶ ಸಿಕ್ಕಿದೆ. ರಂಗಪ್ಪ ಹೋಗ್ಬಿಟ್ನಾ ಚಿತ್ರದಲ್ಲಿ ಪೂರ್ತಿ ಸೀರೆಯಲ್ಲೇ ಕಂಗೊಳಿಸಲಿದ್ದಾರಂತೆ!
ಸದ್ಯ ಇವರು ಶಿವಣ್ಣನ ಅಭಿನಯದ ಮೈಲಾರಿಯಲ್ಲೂ ನಟಿಸಿದ್ದಾರೆ. ರಮೇಶ್ ನಾಯಕರಾಗಿರುವ ರಂಗಪ್ಪ ಹೋಗ್ಬಿಟ್ನಾ? ಚಿತ್ರದಲ್ಲಿ ಮೊದಲ ಬಾರಿಗೆ ತಾವು ಸೀರೆಯುಟ್ಟಿದ್ದಾಗಿ ಸಂಜನಾ ಹೇಳಿಕೊಂಡಿದ್ದಾರೆ. ವಿಪರ್ಯಾಸ ಅಂದರೆ ಜನ ಇವರನ್ನು ಗಂಡ ಹೆಂಡತಿ ಚಿತ್ರದ ನಾಯಕಿಯ ರೂಪದಲ್ಲೇ ಇನ್ನೂ ಕಾಣಲು ಇಚ್ಛಿಸುತ್ತಿದ್ದಾರೆ. ಕೆಲ ಪಡ್ಡೆಗಳು ಟ್ರಾಫಿಕ್ ಸಿಗ್ನಲಿನಲ್ಲಿ ನಿಂತಿದ್ದರೂ, ಬಂದು ಆಟೊಗ್ರಾಫ್ ಕೇಳುತ್ತಾರಂತೆ. ಅದೇ ಮಾದರಿಯ ಪಾತ್ರದಲ್ಲಿ ಅಭಿನಯಿಸಿ, ನಿಮಗೆ ಉತ್ತಮ ಅಭಿನಯ ಕಲೆ ಇದೆ ಎನ್ನುತ್ತಾರಂತೆ. ಇದೆಲ್ಲಾ ಏಕೆ ಅನ್ನುವುದು ಅವರಿಗೂ ಗೊತ್ತು, ನಟಿ ಸಂಜನಾಗೂ ಗೊತ್ತು. ಆದರೆ ಏನೂ ಹೇಳಲಾಗದೇ ನಗುತ್ತಾರಂತೆ. ಈ ಒಂದು ಭಿನ್ನ ಪಾತ್ರ ಅವರ ಹಳೆಯ ವೈಭವವನ್ನು ಮರೆಸುತ್ತಾ ನೋಡಬೇಕು.