ನವ್ಯಾ ನಾಯರ್ ಎಂಬ ಮಲಯಾಳಿ ಕುಡಿ ನಿಮಗೆಲ್ಲಾ ನೆನಪಿರಲೇ ಬೇಕು. ಅದೇ 'ಗಜ' ಚಿತ್ರದಲ್ಲಿ ದರ್ಶನ್ ಜತೆ ಕುಣಿದ ಬೆಡಗಿ.
ಮಲೆಯಾಳಂನ ಈ ಕಣ್ಮಣಿ ಎಷ್ಟೊಂದು ಗಟ್ಟಿಗಿತ್ತಿ ಅಂದರೆ ಸಾಮಾನ್ಯವಾಗಿ ತಾಯಿಯಾಗುವ ವಿಚಾರವನ್ನು ಎಲ್ಲ ನಟಿಮಣಿಯರು ಗುಟ್ಟಾಗಿಡಲು ಬಯಸುತ್ತಾರೆ. ಚಾಲ್ತಿಯಲ್ಲಿರುವಾಗಲಂತೂ ಮದುವೆ, ಮಕ್ಕಳು, ಸಂಸಾರ ಇದೆಲ್ಲ ಹೊರ ಬರದಂತೆ ಎಚ್ಚರ ವಹಿಸುತ್ತಾರೆ. ಅವಕಾಶಗಳು ಕಡಿಮೆಯಾಗಿಬಿಡುತ್ತವೆ ಎಂಬ ಭಯ ಇದಕ್ಕೆ ಕಾರಣ.
ದಕ್ಷಿಣ ಭಾರತದ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನವ್ಯಾ 'ನನಗೆ ಅಮ್ಮನಾಗುವ ಬಯಕೆ' ಎಂದು ಬಾಯ್ಬಿಟ್ಟು ಹೇಳಿಕೊಂಡಿದ್ದಾಳೆ. ನವ್ಯಾ ಸ್ಪುರದ್ರೂಪಿ ಸಂತೋಷ್ ಮೆನನ್ ಕೈ ಹಿಡಿದು ಆರು ತಿಂಗಳಾಗಿದೆಯಷ್ಟೆ. ಈ ಮಲೆಯಾಳಿ ಜೋಡಿಯ ವಾಸವೀಗ ಮುಂಬೈನಲ್ಲಿ. 'ಹರಿಚಂದನಂ' ಚಿತ್ರೀಕರಣಕ್ಕೆಂದು ತಿರುವನಂತಪುರಕ್ಕೆ ಬಂದಿದ್ದ ಈಕೆಯನ್ನು ಮಾಧ್ಯಮದ ಮಂದಿ ಮಾತನಾಡಿಸಿದಾಗ, 'ಮಗು ಬೇಕು ಎಂಬ ಹಂಬಲ ಎಲ್ರಿಗೂ ಇರೋಲ್ವೆ ಹೇಳಿ? ನನ್ಗೂ ಅಂತಹ ಆಸೆ ಇದ್ಯಪ್ಪ' ಎಂದು ಖುಷ್ ಖುಷ್ ಆಗಿ ಹೇಳಿಕೊಂಡಿದ್ದಾಳೆ.
ಒಟ್ಟಾರೆ ಗಜ ಚಿತ್ರದಲ್ಲಿ ನಮ್ಮ ದರ್ಶನ್ ಜತೆ ಕುಣಿದು ಕುಪ್ಪಳಿಸಿ ಇಲ್ಲಿನ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಸುಂದರಿಗೀಗ ಅಮ್ಮನಾಗಲು ಹೊರಟಿದ್ದು ಅಭಿಮಾನಿಗಳಿಗೆ ಭಾರೀ ಬೇಜಾರಂತೆ.