ನಮ್ಮ ಕನ್ನಡನಾಡಿನಲ್ಲಿ 'ಹೂ'ವಾಗಿ ಅರಳಿದ ಸೆಕ್ಸೀ ನಮಿತಾಗೆ ಏದೇನಾಗಿದೆಯೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ನಾನು ಕೆಟ್ಟವಳಾಗಿದ್ದೇನೆ ಎನ್ನುಲು ಶುರು ಮಾಡಿದ್ದಾರೆ. ಆದರೆ ಈಕೆಗೆ ಅದ್ಯಾವ ಅಂಡರ್‌ವರ್ಲ್ಡ್ ಲಿಂಕೂ ಇಲ್ಲ, ಅಥವಾ ಇನ್ಯಾವ ಗಾಸಿಪ್ಪುಗಳ ವಿವಾದದಲ್ಲೂ ಸದ್ಯ ಸಿಕ್ಕಿಹಾಕಿಕೊಂಡಿಲ್ಲ. ಆದರೂ, ನಮಿತಾ ಇದ್ದಕ್ಕಿದ್ದಂತೆ ತಾನು ಕೆಟ್ಟವಳಾಗಿದ್ದೇನೆ ಎಂದು ಹೇಳಲು ಕಾರಣವಾದರೂ ಏನು ಎಂದು ಈಕೆಯ ಅಭಿಮಾನಿಗಳು ವಿಪರೀತ ತಲೆಕೆಡಿಸಿಕೊಂಡಿದ್ದಾರೆ.
ನಮಿತಾ ಮಾತ್ರ ಟ್ವಿಟರ್ ಮೂಲಕ ನಾನು ತುಂಬ ಕೆಟ್ಟವಳಾಗಿದ್ದೇನೆ. ಆದರೆ ಅಭಿಮಾನಿಗಳೇ ದಯವಿಟ್ಟು ನನ್ನನ್ನು ದೂರಮಾಡಬೇಡಿ. ಎಂದಿಗೂ ನನ್ನ ಕೈಬಿಡಬೇಡಿ ಎಂದು ಅಲವತ್ತುಕೊಂಡಿದ್ದಾಳೆ.
ವಿಷಯ ತುಂಬಾ ಸಿಂಪಲ್. ಸೆಕ್ಸೀ ಇಮೇಜ್ ಸಾಕಾಯ್ತು ಎಂದು ಇತ್ತೀಚೆಗೆ ಬಡಬಡಿಸಿದ್ದ ನಮಿತಾಗೆ ಈಗ ಹೊಸತೊಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಆ ಮೂಲಕ ನಮಿತಾ ವಿಭಿನ್ನ ಪಾತ್ರಕ್ಕೆ ಒಕೆ ಅಂದಿದ್ದಾಳೆ. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬರೆದ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು ಇದರಲ್ಲಿ ನಮಿತಾ ಖಳನಾಯಕಿಯ ಪಾತ್ರ ಮಾಡುತ್ತಿದ್ದಾರೆ. ವಿಜಯ್, ಮೀರಾ ಜಾಸ್ಮಿನ್, ಖುಷ್ಬೂ ಹಾಗೂ ನಮಿತಾ ಪಾತ್ರಗಳು ಈ ಚಿತ್ರದ ಪ್ರಮುಖ ಪಾತ್ರಗಳಂತೆ. ಆ ಮೂಲಕ ನಮಿತಾ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
ನೆಗೆಟಿವ್ ಪಾತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ತುಂಬಾ ಕೆಟ್ಟವಳಾಗಿರುತ್ತೇನೆ. ಆದರೆ ನಿಜ ಜೀವನದಲ್ಲಿ ನಾನು ಹಾಗೆ ಇಲ್ಲ. ನಾನು ಎಂದೆಂದಿಗೂ ಅದೇ ಹಳೆಯ ನಮಿತಾಳೇ. ದಯವಿಟ್ಟು ಈ ಚಿತ್ರ ನೋಡಿದ ಮೇಲೆ ನನ್ನ ಮೇಲಿನ ಅಭಿಮಾನ ಕಳೆದುಕೊಳ್ಳಬೇಡಿ ಎಂದು ನಮಿತಾ ಟ್ವಿಟರ್‌ನಲ್ಲಿ ಉಲಿದಿದ್ದಾರೆ.