ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ದರ್ಶನ್ ಅಭಿನಯದ ಪ್ರಿನ್ಸ್ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಿದೆ. ಈ ಹಂತದಲ್ಲಿ ಮಾತಿನ ಭಾಗದ ಸನ್ನಿವೇಶ ಹಾಗೂ ಪಳನಿರಾಜ್ ಸಾಹಸ ನಿರ್ದೇಶನದಲ್ಲಿ ದರ್ಶನ್, ಆದಿ ಲೋಕೇಶ್, ಅವಿನಾಶ್, ಶೋಭರಾಜ್ ಮುಂತಾದವರು ಭಾಗವಹಿಸಿದ್ದ ಸಾಹಸ ಸನ್ನಿವೇಶ ಚಿತ್ರೀಕರಣಗೊಂಡಿದೆ. 21 ದಿನಗಳ ಕಾಲ ಮೈಸೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆದಿದೆ ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ.
ಇದೊಂದು ಸಾಹಸ ಪ್ರಧಾನ ಚಿತ್ರವಾಗಿದ್ದು, ದರ್ಶನ್ ಇದಕ್ಕೆ ಸೂಕ್ತವಾಗಿ ಸ್ಪಂಧಿಸಿದ್ದಾರೆ. ನಿಜಕ್ಕೂ ಇದೊಂದು ಭಾರೀ ಜನಮೆಚ್ಚುಗೆಯ ಚಿತ್ರವಾಗಲಿದೆ ಎನ್ನುವುದು ನನ್ನ ಅಭಿಪ್ರಾಯ. ಕನ್ನಡದಲ್ಲಿ ಇದುವರೆಗೂ ಮೂಡಿ ಬರದ ಹಲವು ವಿನೂತನ ಪ್ರಯೋಗಗಳನ್ನು ಇದರಲ್ಲಿ ಮಾಡಿದ್ದೇವೆ. ಜನರನ್ನು ಸೆಳೆದಿಡುವ ಸಾಮರ್ಥ್ಯ ಈ ಚಿತ್ರದಲ್ಲಿ ಇದೆ ಎನ್ನುತ್ತಾರೆ ಸಂದೇಶ್ ನಾಗರಾಜ್.
ಚಿತ್ರಕ್ಕೆ ಎಂ. ಎಸ್. ರಮೇಶ್ ಸಂಭಾಷಣೆ, ವಿ. ಹರಿಕೃಷ್ಣರ ಸಂಗೀತ, ವೀನಸ್ಮೂರ್ತಿ ಛಾಯಾಗ್ರಹಣ, ಲಕ್ಷ್ಮಣ್ರೆಡ್ಡಿ ಸಂಕಲನ, ಪಳನಿರಾಜ್ ಮತ್ತು ರವಿವರ್ಮ ಸಾಹಸ ನಿರ್ದೇಶನ ಇದೆ. ತಾರಾಬಳಗದಲ್ಲಿ ದರ್ಶನ್, ಜೆನ್ನಿಫರ್, ನಿಖಿತ, ಅವಿನಾಶ್, ಶೋಭರಾಜ್, ಆದಿ ಲೋಕೇಶ್, ಆವಿನಾಶ್, ಸಿಹಿಕಹಿ ಚಂದ್ರು, ರಂಗಾಯಣ ರಘು, ಶೇಖರ್ ಕೋಟ್ಯಾನ್ ಮುಂತಾದವರಿದ್ದಾರೆ.