ಇಂಥ ಮಳೆಗಾಲದಲ್ಲೂ ಗಾಂಧಿನಗರದಲ್ಲಿ ಬಿಸಿಲಿನ ಅಬ್ಬರ ಜೋರಾಗಿದೆ. ಇದೇನು ವಿಚಿತ್ರ, ಮಳೆ ಚೆನ್ನಾಗಿ ಸುರಿಯುತ್ತಿರುವಾಗ ಬಿಸಿಲು ಎಲ್ಲಿಂದ ಬಂತು ಅಂದುಕೊಂಡಿರಾ?
ಇದು ಸಂದೀಪ್ ಗೌಡ ಚೊಚ್ಚಲ ನಿರ್ದೇಶನದ 'ಬಿಸಿಲೆ' ಚಿತ್ರದ ಕುರಿತಾದ ಸುದ್ದಿ. ನಮ್ಮ ಪ್ರೀತಿಯ ದೂದ್ ಪೇಡಾ ಅಲ್ಲಲ್ಲ ದಿಗಂತ್ ಈ ಚಿತ್ರದ ನಾಯಕ. ಇವರಿಗೆ ಜೋಗಿಯ ಬೆಡಗಿ ಜೆನ್ನಿಫರ್ ಕೊತ್ವಾಲ್ ನಾಯಕಿ. ಕೆಲದಿನಗಳ ಕಾಲ ಕುಂಟುತ್ತಾ ಸಾಗಿದ್ದ ಈ ಚಿತ್ರದ ಚಿತ್ರೀಕರಣ ಬಹುತೇಕ ಈಗ ಮುಗಿದಿದ್ದು, ಬಿಡುಗಡೆ ಕಾಣಲು ಹೊರಟಿದೆ. ಹಾಗಾಗಿ ಕೊಂಚ ಸದ್ದು ಮಾಡುತ್ತಿದೆ.
ಗುಂಗುರು ಕೂದಲಿನ ವಿಗ್, ಕಪ್ಪು ಮೈ ಬಣ್ಣದ ಮೇಕಪ್ ಹೊಂದಿ ನಿಗ್ರೊ ಹುಡುಗನಾಗಿ ದಿಗಂತ್ ಒಂದು ಹಾಡಿನಲ್ಲಿ ವಿಭಿನ್ನವಾಗಿ ಅಭಿನಯಿಸಿದ್ದಾರೆ. ಬೆಳ್ಳನೆ ಹುಡುಗ ಕಪ್ಪಾಗಿ ನಟಿಸುವ ಮೂಲಕ ಎಲ್ಲರಲ್ಲೂ ಒಂದು ವಿಸ್ಮಯ ಮೂಡಿಸಿದ್ದಾರೆ. ಈ ಹಾಡಿನಲ್ಲಿ ಗ್ರಾಫಿಕ್ ಹಾಗೂ ಲೇಸರ್ ತಂತ್ರಜ್ಞಾನ ಬಳಸಲಾಗಿದ್ದು, ಅತ್ಯಾಧುನಿಕ ರೀತಿಯಲ್ಲಿ ಸಿದ್ಧಪಡಿಸಲಾಗಿದೆಯಂತೆ. ಬಿಳಿ ಹುಡುಗನ್ನು ಕಪ್ಪಾಗಿಸಲು ಎರಡು ಗಂಟೆ ಸಮಯ ಹಿಡಿಯಿತಂತೆ. ಮೇಕಪ್, ಡ್ರೆಸ್ಸಿಂಗ್ ಅಂತ ತುಂಬಾ ನಾಜೂಕಾಗಿ ಮಾಡಲಾಗಿದ್ದು, ಇದೊಂದು ಕೃತಕ ಅಂತ ಜನರಿಗೆ ಎಲ್ಲೂ ಅನ್ನಿಸಬಾರದು, ಆ ರೀತಿ ಸಿದ್ಧಪಡಿಸಲಾಗಿದೆ. ಮೇಕಪ್ ಮ್ಯಾನ್‌ಗಳಿಗಂತೂ ಇದೊಂದು ಸವಾಲಾಗಿತ್ತು. ಅದನ್ನವರು ಯಶಸ್ವಿಯಗಿ ನಿಭಾಯಿಸಿದ್ದಾರೆ ಎನ್ನುವುದು ನಿರ್ದೇಶಕರ ಮಾತು.
ಚಿತ್ರದ ಹಾಡನ್ನು ಸಕಲೇಶಪುರದಲ್ಲಿ ಚಿತ್ರೀಕರಿಸಲಾಗಿದೆ. ನಿರಂಜನ ಬಾಬು ಛಾಯಾಗ್ರಾಹಕರು. 'ಈ ಬಿಸಿಲಲ್ಲಿ ತಂಗಾಳಿಯಲ್ಲಿ ನಾನಿರುವೆ' ಎನ್ನುವುದು ಚಿತ್ರದ ಟೈಟಲ್ ಸಾಂಗ್ ಆಗಿದ್ದು, ಚಿತ್ರೀಕರಿಸಿ ಆಗಿದೆ ಎನ್ನುತ್ತಾರೆ ನಿರ್ದೇಶಕರು. ಕೇರಳ ಮತ್ತು ಮಂಗಳೂರು ಸುತ್ತ ಈ ಹಾಡಿನ ಚಿತ್ರೀಕರಣವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲಿದೆ.