ಬಾಲಿವುಡ್ ಚೆಲುವೆ ಕಂಗನಾ ರಾನಾವತ್ ಕನ್ನಡಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿಯೀಗ ಗಾಂಧಿನಗರದ ಗಲ್ಲಿಗಳಲ್ಲಿ ಅಡ್ಡಾಡುತ್ತಿದೆ. ಜೋಗಿ ಭಾಗ 2 ಎಂದೇ ಹೆಸರಾಗಿರುವ ರಕ್ಷಿತಾ ಪ್ರೇಮ್ ನಿರ್ಮಾಣ ನಿರ್ದೇಶನದ ಜೋಗಯ್ಯ ಚಿತ್ರಕ್ಕೆ ಕಂಗನಾ ನಾಯಕಿ ಎಂದ ಸುದ್ದಿಯೀಗ ಕೇಳಿ ಬಂದಿದೆ!
ಈಗಾಗಲೇ ಒಮ್ಮೆ ಅಮಿಷಾ ಪಟೇಲ್, ಮತ್ತೊಮ್ಮೆ ಅಮೃತಾ ರಾವ್, ಮಗದೊಮ್ಮೆ ನಯನತಾರಾ, ಜ್ಯಾಕ್ವಿಲೀನ್ ಫೆರ್ನಾಂಡಿಸ್, ಅನುಷ್ಕಾ ಶರ್ಮಾ... ಹೀಗೆ ನೂರೆಂಟು ಹೆಸರು ದಿನದಿನವೂ ಕೇಳಿ ಬಂದಿದ್ದರಿಂದ ಇದೂ ಅದೇ ರೀತಿ ಠುಸ್ ಪಟಾಕಿಯೋ ಎಂಬ ಸಂಶಯ ಬರದೆ ಇರದು. ಗಾಂಧಿನಗರದ ಬಹಳಷ್ಟು ಮಂದಿ ಇದೆಲ್ಲಾ ಪ್ರೇಮ್ ಗಿಮಿಕ್ ಕಿತಾಪತಿಗಳು ಎಂದು ಹೇಳುತ್ತಿದ್ದಾರೆ. ಇದನ್ನು ಕೂಡಾ ಅಲ್ಲಗಳೆಯುವಂತಿಲ್ಲ.
IFM
ಅದ್ದೂರಿಯಾಗಿ ಆರಂಭ ಪಡೆದ ಜೋಗಯ್ಯ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಇದಕ್ಕಾಗಿ ಕಂಗನಾ ರಾನಾವತ್ ಹಾಗೂ ಪ್ರಾಚಿ ದೇಸಾಯಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳೀಗ ಗಾಂಧಿನಗರದ ಬಿಸಿಬಿಸಿ ಸುದ್ದಿ. ಯಾನಾ ಗುಪ್ತಾ, ಮಲ್ಲಿಕಾ ಶೆರಾವತ್, ನಿಶಾ ಕೊಠಾರಿ ಹೀಗೆ ಬಾಲಿವುಡ್ ಬೆಡಗಿಯರನ್ನೇ ಕರೆ ತಂದು ಅಭ್ಯಾಸವಾಗಿ ಹೋಗಿರುವ ಪ್ರೇಮ್ಗೆ ಕಂಗನಾ, ಪ್ರಾಚಿಯನ್ನು ಕರೆತರುವುದೇನೂ ಕಷ್ಟವಲ್ಲವೆಂದು ಕೂಡಾ ಅಷ್ಟೇ ನಿಜ. ಹಾಗಾಗಿ ಈ ಸುದ್ದಿ ಅಧಿಕೃತವಾಗುವವರೆಗೂ ಇದನ್ನು ಸುಳ್ಳು ಎಂದು ಬಿಡುವಂತೆಯೂ ಇಲ್ಲ, ಸತ್ಯ ಎಂದು ನಂಬುವಂತೆಯೂ ಇಲ್ಲ ಬಿಡಿ.
ಅಂದಹಾಗೆ, ಆ.16ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಸತತ 70 ದಿನ ಚಿತ್ರೀಕರಣ ನಡೆಯಲಿದೆ. ಬಹುತೇಕ ಚಿತ್ರ ರಾಜ್ಯ ಹಾಗೂ ಮುಂಬಯಿಯಲ್ಲಿ ಶೂಟಿಂಗ್ ನಡೆಯಲಿದೆ. ಕೊನೆಯದಾಗಿ, ಪ್ರೇಮ್ ಇನ್ನೂ ಒಂದು ಸಸ್ಪೆನ್ಸ್ ಬಚ್ಚಿಟ್ಟಿದ್ದಾರೆ. ಅವರೇ ಹೇಳುವಂತೆ ಈ ಚಿತ್ರದಲ್ಲಿ ಪ್ರಮುಖ ರಾಜಕಾರಣಿ ಒಬ್ಬರು ಅಭಿನಯಿಸುತ್ತಿದ್ದಾರಂತೆ. ಅವರ್ಯಾರು ಎಂಬ ಗುಟ್ಟನ್ನು ಇನ್ನೂ ರಟ್ಟು ಮಾಡಿಲ್ಲ.