'ಕೂಲ್' ವಿವಾದ ಹಾಟ್: ಗಣೇಶ್ ನಿರ್ದೇಶನಕ್ಕೆ ಗ್ರೀನ್ ಸಿಗ್ನಲ್
MOKSHA
ಕೂಲ್ ಚಿತ್ರದ ವಿವಾದ ತಣ್ಣಗಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಶಿಲ್ಪಾ-ಗಣೇಶ್ ಹಾಗೂ ನಿರ್ದೇಶಕ ಮುಸ್ಸಂಜೆ ಮಹೇಶ್ ನಡುವಿನ ಬಿಕ್ಕಟ್ಟಿನ ಅಂತರ ಇನ್ನೂ ಹೆಚ್ಚಾಗಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಮದ್ಯೆ ಪ್ರವೇಶಿಸಿ ಸಭೆ ನಡೆಸಿ ನೀಡಿದ ತೀರ್ಪು ಇದೀಗ ನಿರ್ದೇಶಕರನ್ನು ಅಚ್ಚರಿಗೆ ತಳ್ಳಿದೆ. ಕಾರಣ, ವಾಣಿಜ್ಯ ಮಂಡಳಿ ಗಣೇಶ್ ಪರವಾಗಿ ತೀರ್ಪು ನೀಡಿದ್ದು, ನಿರ್ದೇಶನವನ್ನು ಗಣೇಶ್ ಅವರೇ ಮುಂದುವರಿಸಿಕೊಂಡು ಹೋಗಲು ಅನುಮತಿ ನೀಡಿದೆ.
ಅಷ್ಟೇ ಅಲ್ಲ. ಗಣೇಶ್ ನಿರ್ದೇಶಕರಾದ ಮುಸ್ಸಂಜೆ ಮಹೇಶ್ ಅವರಿಗೆ ಒಂದು ಲಕ್ಷ ಪರಿಹಾರವನ್ನೂ ನೀಡಬೇಕೆಂದು ತೀರ್ಪು ನೀಡಿದೆ. ಮಂಡಳಿಯ ನಿಲುವಿಗೆ ತಾವು ಬದ್ಧ ಎಂದು ಗಣೇಶ್ ಶಿಲ್ಪಾ ದಂಪತಿ ಹೇಳಿದ್ದು, ಮುಂದಿನ ಚಿತ್ರೀಕರಣಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಆದರೆ ಅತ್ತ ನಿರ್ದೇಶಕ ಮುಸ್ಸಂಜೆ ಮಹೇಶ್ ಮಾತ್ರ ಈ ತೀರ್ಪಿಗೆ ಅಪಸ್ವರವೆತ್ತಿದ್ದು, ನಿರ್ದೇಶಕರ ಸಂಘಕ್ಕೆ ಮತ್ತೆ ದೂರು ನೀಡಿದ್ದಾರೆ.
ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್- ಶಿಲ್ಪಾ ದಂಪತಿ ನಿರ್ಮಿಸುತ್ತಿರುವ ಗಣೇಶ್ ನಟನೆಯ ಕೂಲ್- ಸಕತ್ ಹಾಟ್ ಮಗಾ ಚಿತ್ರೀಕರಣ ಆರಂಭಗೊಂಡ ಎರಡೇ ದಿನಗಳಲ್ಲಿ ಚಿತ್ರದಿಂದ ನಿರ್ದೇಶಕ ಮುಸ್ಸಂಜೆ ಮಹೇಶ್ ಹೊರನಡೆದಿದ್ದರು. ಚಿತ್ರದ ಛಾಯಾಗ್ರಾಹಕ ರತ್ನವೇಲು ಅವರು ನನಗೆ ಸಹಕರಿಸುತ್ತಿಲ್ಲ ಎಂದು ಮಹೇಶ್ ಆರೋಪಿಸುವ ಜೊತೆಗೆ ಈದನ್ನು ಶಿಲ್ಪಾ- ಗಣೇಶ್ ಅವರಲ್ಲಿ ನಾನೀಗಲೇ ದೂರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೇರವಾಗಿ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿದ್ದರು. ಅನಿವಾರ್ಯವಾಗಿ ಗಣೇಶ್ ನಿರ್ದೇಶಕನ ಕುರ್ಚಿಯಲ್ಲಿ ಕೂತು ಮೊದಲ ಬಾರಿಗೆ ನಿರ್ದೇಶನ ಮಾಡ ಹೊರಟಿದ್ದರು.
ಈ ವಿಚಾರವಾಗಿ ಮಧ್ಯ ಪ್ರವೇಶಿಸಿದ ವಾಣಿಜ್ಯ ಮಂಡಳಿ ಇದೀಗ ತೀರ್ಪು ನೀಡಿದ್ದು, ಗಣೇಶ್ ಅವರೇ ಚಿತ್ರ ನಿರ್ದೇಶಿಸಬಹುದೆಂದು ಹೇಳಿದೆ. ಜೊತೆಗೆ 1 ಲಕ್ಷ ರೂಪಾಯಿಗಳ್ನನು ಮುಸ್ಸಂಜೆ ಮಹೇಶ್ ಅವರಿಗೆ ನೀಡಬೇಕೆಂದು ಗಣೇಶ್ ಅವರಿಗೆ ತಾಕೀತು ಮಾಡಿದೆ. ಆದರೆ ಮೂಲಗಳ ಪ್ರಕಾರ, ಮುಸ್ಸಂಜೆ ಮಹೇಶ್ ಈಗಾಗಲೇ ಗಣೇಶ್ ಬಳಿಯಿಂದ ಒಂದು ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಡೆದಿದ್ದು, ಇನ್ನೂ ಹೆಚ್ಚುವರಿಯಾಗಿ ಗಣೇಶ್ ಕೂಲ್ ಚಿತ್ರದ ಈವರೆಗಿನ ಕೆಲಸಕ್ಕಾಗಿ ಮಹೇಶ್‌ಗೆ ನೀಡಬೇಕೆಂದು ವಾಣಿಜ್ಯ ಮಂಡಳಿ ತಿಳಿಸಿದೆ.