ಕೋಮಲ್ ನಾಯಕರಾಗಿ ಅಭಿನಯಿಸಿರುವ ಭಾರೀ ನಿರೀಕ್ಷೆಯ ವ್ಹಾರೆವ್ಹಾ.. ಚಿತ್ರ ಸದ್ಯ ಮಾತಿನ ಮನೆ ತಲುಪಿದೆ. ಹೌದು, ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಮಾತಿನ ಮರುಲೇಪನವೂ ಪ್ರಸಾದ್ ಸ್ಟುಡಿಯೋದಲ್ಲಿ ಪೂರ್ಣಗೊಂಡಿದೆ.
ಹಾಸ್ಯವನ್ನು ಪ್ರಧಾನವಾಗಿರಿಕೊಂಡು ಕೌಟುಂಬಿಕ ಕಂ ಆಕ್ಷನ್ ಚಿತ್ರ ನಿರ್ಮಿಸಿದ್ದಾರೆ ಜೈಜಗದೀಶ್. ಚಿತ್ರವನ್ನು ಇವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿದ್ದಾರೆ. ಸದ್ಯ ಚಿತ್ರದ ಹಲವು ಭಾಗದ ಕೆಲಸ ಮುಗಿದು ಹೋಗಿದೆ. ಕೇವಲ ಗೀತೆಗಳ ಚಿತ್ರೀಕರಣ ಅದರೆ ಚಿತ್ರದ ಮಹತ್ವದ ಎಲ್ಲಾ ಭಾಗ ಮುಗಿದಂತೆ. ಕೊನೆಯ ಹಂತದ ಕೆಲ ರಿಪೇರಿ ಕೆಲಸ ಉಳಿದಿರುತ್ತದೆ ಅಷ್ಟೆ ಎನ್ನುತ್ತಾರೆ ಜೈ ಜಗದೀಶ್.
ಕೋಮಲ್ಗೆ ಇದು ಒಂದು ವಿಶೇಷ ಹೀರೊ ಇಮೇಜ್ ನೀಡಬಲ್ಲ ಚಿತ್ರವಂತೆ. ಏಕೆಂದರೆ ಇಲ್ಲಿ ಕೋಮಲ್ ಕೇವಲ ಹಾಸ್ಯನಟರಲ್ಲ. ಇವರಿಂದ ಫೈಟ್ ಮಾಡಿಸಲಾಗಿದೆ. ಒಬ್ಬ ರಿಯಲ್ ಫೈಟ್ ಮಾಸ್ಟರ್ ರೀತಿ ಕೋಮಲ್ ಕಾಣಿಸಿಕೊಂಡಿದ್ದಾರಂತೆ. ಜತೆಗೆ ಹಾಸ್ಯವನ್ನೂ ಬೆರೆಸಿ ಅತ್ಯುತ್ತಮ ಅಭಿನಯವನ್ನೂ ಇವರಿಂದ ತೆಗೆಸಲಾಗಿದೆಯಂತೆ. ಈ ಚಿತ್ರ ಬಿಡುಗಡೆ ನಂತರ ಕೋಮಲ್ಗೆ ಇದುವರೆಗೂ ಇದ್ದುದಕ್ಕಿಂತ ಭಿನ್ನ ಗೆಟಪ್ ಲಭಿಸಲಿದೆ ಎಂದು ಹೇಳಲಾಗುತ್ತಿದೆ.
ಎಲ್ಲಾ ಒತ್ತಟ್ಟಿಗಿರಲಿ, ಅಣ್ಣ ಜಗ್ಗೇಶ್ ನೆರಳಿನಲ್ಲೇ ಬೆಳೆಯುತ್ತಿದ್ದಾನೆ ಎನ್ನುವ ಆರೋಪದಿಂದಲೂ ಇವರಿಗೆ ಆಚೆ ಬರಲು ಈ ಚಿತ್ರದ ಮೂಲಕ ಸಾಕಷ್ಟು ಅವಕಾಶ ದಕ್ಕಿದೆಯಂತೆ. ಕೋಮಲ್ಗೆ ಒಳ್ಳೆಯದಾಗಲಿ.