ರಾಧಿಕಾ ಗಾಂಧಿ ಮತ್ತೆ ಬಣ್ಣ ಹಚ್ಚಲಿದ್ದಾರೆ. ಅದೂ ಅಕ್ಕ ಪೂಜಾ ಜೊತೆಗೇ ಅನ್ನೋದು ಮತ್ತೊಂದು ಸುದ್ದಿ. ಅಕ್ಕ ಪೂಜಾ ಗಾಂಧಿಯ ಕೃಪಾಕಟಾಕ್ಷದಿಂದ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡು, ಮತ್ತೆ ಅವಕಾಶವಿಲ್ಲದೆ ಮನೆ ಸೇರಿದ್ದ ಈ ನಟೀಮಣಿ ಅಕ್ಕನ ಜೊತೆಗೆ ಶ್ರೀಹರಿಕಥೆಯ ನಂತರ 'ಹೊಸ ಪ್ರೇಮ ಪುರಾಣ' ಹೇಳಲಿದ್ದಾರೆ.
ಶಿವಕುಮಾರ್ ನಿರ್ದೇಶನದ ಹೊಸ ಪ್ರೇಮ ಪುರಾಣ ಚಿತ್ರಕ್ಕೆ ಈಕೆ ನಾಯಕಿ. ಈ ಚಿತ್ರದ ಶೀರ್ಷಿಕೆಗೆ ಸ್ಪೂರ್ತಿ 'ರಾಮ್' ಚಿತ್ರದ ಹಾಡು ಅನ್ನುವುದರಲ್ಲಿ ಎರಡು ಮಾತಿಲ್ಲ. ಹೊಸ ಗಾನ ಬಜಾನಾ... ಹಳೇ ಪ್ರೇಮ ಪುರಾಣ... ಎನ್ನುವ ಸಾಲಿನಲ್ಲಿ ಹಳೇ ತೆಗೆದು 'ಹೊಸ'ದನ್ನು ಬೆಸೆದಿದ್ದಾರೆ ನಿರ್ಮಾಪಕರೂ ಆಗಿರುವ ಶಿವು. ರಾಧಿಕಾ ನೋಡಲು ಅಕ್ಕನಿಗಿಂತ ಸುಂದರಿಯೆಂದು ಗಾಂಧಿನಗರವೇ ಹೇಳಿದರೂ, ಅದೃಷ್ಟ ಮಾತ್ರ ಅಕ್ಕನಿಗೆ ಕೂಡಿ ಬಂದಂತೆ ಬಂದಿಲ್ಲ. ಜೊತೆಗೆ ಅಕ್ಕನ ಹಾಗೆ ನಟನಾ ಕೌಶಲ್ಯವೂ ಇಲ್ಲ. ಹೀಗಾಗಿ ಅಕ್ಕ ಪೂಜಾಗೆ ಹೋದಲ್ಲೆಲ್ಲ ತನ್ನ ತಂಗಿಗೊಂದು ರೋಲ್ ಕೊಡಿ ಎನ್ನುವುದೇ ದೊಡ್ಡ ಕೆಲಸವಾಗಿದೆ.
ಇಷ್ಟಾದರೂ ರಾಧಿಕಾ ಸ್ಟಾರ್ ತಿರುಗಲೇ ಇಲ್ಲ. ಅಕ್ಕ ತಂಗಿ ಇಬ್ಬರೂ ದಯಾಳ್ ಪದ್ಮನಾಭನ್ ನಿರ್ದೇಶನದ ಶ್ರೀಹರಿಕಥೆ ಚಿತ್ರದಲ್ಲಿ ಕುಣಿದದ್ದೇ ಬಂತು. ಏನೂ ಲಾಭವಾಗಲಿಲ್ಲ. ಕಲಾಕಾರ್ ಚಿತ್ರ ಇವಳಿಗೆ ಮಾತ್ರವಲ್ಲ ನಟ ಹರೀಶ್ ರಾಜ್ಗೂ ಪ್ರಯೋಜನ ತಂದುಕೊಡಲಿಲ್ಲ. ಚಿಕ್ಕಮಗಳೂರ ಚಿಕ್ಕ ಮಲ್ಲಿಗೆಯೂ ಪರಿಮಳ ಬೀರಲಿಲ್ಲ. ಇದೀಗ ಇನ್ನೊಂದು ಅವಕಾಶ ರಾಧಿಕಾಗೆ ಲಭಿಸಿದೆ. ಅದರಲ್ಲಾದರೂ ಯಶಸ್ಸು ಕಾಣುತ್ತಾರಾ ಅಂತ ಕಾದು ನೋಡಬೇಕಿದೆ.