5 ಜಿಲ್ಲೆಗಳಲ್ಲಿ ಶಿವಣ್ಣನ 'ಚೆಲುವೆ'ಗೆ ತಡೆ; ಚಿತ್ರಕ್ಕಾದ ಖರ್ಚೆಷ್ಟು?
PR
ಒಂದೆಡೆ ಅಂತೂ ಇಂತೂ ಈ ಶುಕ್ರವಾರ ಬಿಡುಗಡೆಯಾದ ಶಿವಣ್ಣ ಅವರ ಬಹುನಿರೀಕ್ಷೆಯ ಚೆಲುವೆಯೇ ನಿನ್ನ ನೋಡಲು ಚಿತ್ರದ ಪ್ರದರ್ಶನಕ್ಕೆ ಐದು ಜಿಲ್ಲೆಗಳ್ಲಲಿ ತಾತ್ಕಾಲಿಕ ತಡೆಯ ವಿಘ್ನ ತಲೆದೋರಿದೆ. ಇನ್ನೊಂದೆಡೆ ಭಾರೀ ಬಜೆಟ್ಟಿನ ಈ ಚಿತ್ರಕ್ಕೆ ಅಂತಹ ಬೃಹತ್ ಮಟ್ಟದ ಲಾಭ ತರುತ್ತಾ ಅನ್ನುವುದೂ ಪ್ರಶ್ನೆಯಾಗಿದೆ.
ಅದೇನೇ ಇರಲಿ. ಚಿತ್ರವಂತೂ ಬಿಡುಗಡೆ ಕಂಡಿದೆ. ಆದರೆ ಆರಂಭದಲ್ಲೇ ವಿಘ್ನವೂ ಎದುರಾಗಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಆರಂಭದಲ್ಲೇ ತಡೆಯಾಜ್ಞೆ ಬಿದ್ದಿದೆ. ಹಣಕಾಸು ವಿವಾದದ ಹಿನ್ನೆಲೆಯಲ್ಲಿ ನಿರ್ಮಾಪಕ ರಾಘವೇಂದ್ರ ಕಾಮತ್ ಅವರು ಚೆಲುವೆಯೇ ನಿನ್ನ ನೋಡಲು ಚಿತ್ರದ ನಿರ್ಮಾಪಕ ಎನ್.ಎಂ.ಸುರೇಶ್ ವಿರುದ್ಧ ಬೆಂಗಳೂರು ಸಿಟಿ ಸಿವಿಲ್ ಕೋರ್ಟಿನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ತಡೆ ನೀಡಲಾಗಿದೆ.
ಅಂದಹಾಗೆ, ಚೆಲುವೆಯೇ ನಿನ್ನ ನೋಡಲು ಚಿತ್ರಕ್ಕೆ ಆದ ಖರ್ಚು ಎಷ್ಟು ಎಂಬ ಪ್ರಶ್ನೆಯೂ ಈಗ ಎಲ್ಲೆಡೆ ಉದ್ಭವಿಸಿದೆ. ಚಿತ್ರದ ನಿರ್ಮಾಪಕ ಎನ್.ಎಂ. ಸುರೇಶ್ ಸುರೇಶ್ ಕೇಳಿದರೆ ನನಗೂ ಗೊತ್ತಿಲ್ಲ. ಹಾಕುವುದನ್ನೆಲ್ಲಾ ತೆರೆ ಮೇಲೆ ಹಾಕಿದ್ದೇನೆ. ಕನ್ನಡ ಚಿತ್ರರಂಗ ಇದುವರೆಗೆ ಕೇಳದ ಮೊತ್ತವನ್ನು ಸುರಿದಿದ್ದೇನೆ. ಎಂಟು ಅಂದರೆ ಓಕೆ, ಹನ್ನೊಂದು ಅಂದರೂ ಓಕೆ. ಸಿನಿಮಾ ನೋಡಿ. ಆಮೇಲೆ ಮಾತಾಡಿ... ಅಂತಾರೆ!
ಅಸಲಿ ಚಿತ್ರಕ್ಕೆ ಎಷ್ಟು ವೆಚ್ಚವಾಗಿದೆ ಅಂತ ಗೊತ್ತಾಗುತ್ತಿಲ್ಲ. ಒಬ್ಬರು ಆರು ಕೋಟಿ ಅಂತಾರೆ, ಇನ್ನೊಬ್ಬರು ಎಂಟು ಅಂತಾರೆ, ಇನ್ನೊಬ್ಬರು ಹನ್ನೊಂದು ಅಂತಾರೆ. ನಿಜಕ್ಕೂ ಎಷ್ಟಾಗಿದೆ? ಅನ್ನುವುದು ಈಗ ಎಲ್ಲರ ಮುಂದಿರುವ ಪ್ರಶ್ನೆ. ಒಟ್ಟಾರೆ ಶಿವಣ್ಣನ ಚಿತ್ರ ಜೀವನದಲ್ಲಿ ಇಲ್ಲಿವರೆಗೆ ಇಂಥದ್ದೊಂದು ಭಾರೀ ಬಜೆಟ್ಟಿನ ಚಿತ್ರ ಬಂದಿರಲಿಲ್ಲ. ಇಷ್ಟೊಂದು ಬಜೆಟ್ಟಿನಲ್ಲಿ ನಿರ್ಮಾಣವಾದ ಚಿತ್ರ ಎನ್ನುವುದರಿಂದ ಹಿಡಿದು ಅಷ್ಟೊಂದು ದೇಶಗಳಲ್ಲಿ ಚಿತ್ರಿಸಿದ ಕಾರಣಕ್ಕಾದರೂ ಇದು ಶಿವಣ್ಣನ ಬದುಕಿನ ಸ್ಪೆಶಲ್ ಚಿತ್ರ.
ಸುರೇಶ್ ಕಳೆದ ಏಳೆಂಟು ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದಾರೆ. ಎಕ್ಸಕ್ಯೂಸ್ ಮಿ, ಚಪ್ಪಾಳೆ, ಕಾರಂಜಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಗೆದ್ದಿದ್ದಾರೆ, ಜೊತೆಗೆ ಸೋತಿದ್ದಾರೆ. ಆದರೂ ಚೆಲುವೆಯೇ ನಿನ್ನೇ ನೋಡಲು ತೆರೆಗೆ ಬರಲು ತುಂಬ ತಡವಾಗಿದೆ. ಜೊತೆಗೆ ಿಘ್ನವೂ ತಲೆದೋರಿದೆ. ಇದೆಲ್ಲ ಒಂದು ರೀತಿ ಆತಂಕವಾಗಿಯೂ ಇದೀಗ ಚಿತ್ರತಂಡಕ್ಕೆ ಕಾಡುತ್ತಿದೆ.
ಇನ್ನು ನನ್ನ ಕೈಯಲ್ಲಿ ಏನೂ ಇಲ್ಲ. ಎಲ್ಲವನ್ನೂ ಜನರ ಮುಂದೆ ಇಟ್ಟಿದ್ದೇನೆ. ಕನ್ನಡ ಪ್ರೇಕ್ಷಕರು ಯಾವ ರೀತಿ ಚಿತ್ರವನ್ನು ಬಯಸುತ್ತಾರೋ ಹಾಗೆ ಮತ್ತು ಅದಕ್ಕಿಂತ ಹೊಸದಾದ ಲೋಕವನ್ನು ಅವರ ಮುಂದೆ ಇಡುತ್ತಿದ್ದೇನೆ. ಶಿವಣ್ಣ ನಮಗೆ ಕೈ ಜೋಡಿಸಿದ ರೀತಿಗೆ ಧನ್ಯವಾದ ಎಂದು ಹೇಳಿದರೆ ಅದೂ ತುಂಬಾ ಕಮ್ಮಿ. ಕ್ಯಾಮರಾಮೆನ್ ಕಬೀರ್ ಲಾಲ್ ಅಂತೂ ಚಿತ್ರವನ್ನು ತಲೆ ಮೇಲೆ ಹೊತ್ತುಕೊಂಡು ನಡೆದಿದ್ದಾರೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸ ನನ್ನದು ಎನ್ನುತ್ತಾರೆ ಸುರೇಶ್. ಎಷ್ಟೇ ಆದರೂ, ಚಿತ್ರದ ಯಶಸ್ಸು ನಿಂತಿರುವುದು ಪ್ರೇಕ್ಷಕರ ತೀರ್ಪಿನ ಮೇಲೆಯೇ ಬಿಡಿ.