ದಾವಣಗೆರೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ತಾರೆಯರ ಕ್ರಿಕೆಟ್ ಪಂದ್ಯಾವಳಿ ಏನಾಯಿತೆಂದು ನಿಮಗೆ ಕುತೂಹಲ ಇರಬಹುದು. ಹೌದು. ಒಂದೆರಡು ದಿನ ಸುದೀಪ್ ಭರ್ಜರಿಯಾಗಿಯೇ 60 ರನ್ ಚಚ್ಚಿ ವಿಜಯಮಾಲೆ ಕೊರಳಿಗೆ ಹಾಕಿದರಾದರೂ, ನಂತರ ಈ ಕ್ರಿಕೆಟ್ ಕುತೂಹಲ ಮುಂದುವರಿಯಲಿಲ್ಲ.
ಆರಂಭದಲ್ಲಿ ಪ್ರಾಯೋಜಕರಿಲ್ಲದೇ ಪರದಾಡಿದ ಮೇಲೆ ನಟರ ಕೊರತೆ ಎದುರಾಯಿತು. ನಂತರ ಜನರೇ ಇಲ್ಲದೇ ಸೊರಗಿತು. ಅಷ್ಟಕ್ಕೇ ಮುಗಿಯಲಿಲ್ಲ. ಅಂತಿಮ ಪಂದ್ಯಕ್ಕೆ ಮಳೆ ಎದುರಾಗಿ ಪಂದ್ಯವೇ ಮುಂದೂಡಲ್ಪಟ್ಟಿದೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಇದನ್ನು ಆಯೋಜಿಸಿದ್ದ ನೃತ್ಯ ನಿರ್ದೇಶಕರ ಸಂಘದ ಅಧ್ಯಕ್ಷ ರಾಜೇಶ ಬ್ರಹ್ಮಾವರ ಬಸವಳಿದು ಹೋಗಿದ್ದಾರೆ. ಉಪೇಂದ್ರ, ದರ್ಶನ್, ಗಣೇಶ್, ವಿಜಯ್ ಸೇರಿದಂತೆ ಎಲ್ಲಾ ಸ್ಟಾರ್‌ಗಳು ಬಂದು ನಿಮ್ಮನ್ನು ಮನರಂಜಿಸುತ್ತಾರೆ. ಅದರಿಂದ ಬಂದ ದುಡ್ಡನ್ನು ನಾವು ನಮ್ಮ ಮನೆ ಕಟ್ಟಲು ಬಳಸುತ್ತೇವೆ ಎಂದು ಘೋಷಿಸಿಕೊಂಡಿದ್ದ ಬ್ರಹ್ಮಾವರ ಅವರಿಗೆ ಅವಮಾನವಾಗಿದೆ. ಸ್ಟಾರ್ ನಟರ ಅನುಪಸ್ಥಿತಿ ಎಲ್ಲಾ ವಿಧದಲ್ಲೂ ಇವರಿಗೆ ಹೊಡೆತ ನೀಡಿದೆ.
ಕೊನೆಯಲ್ಲಿ ಸುದೀಪ್ ಪಾಲ್ಗೊಂಡು ಇವರ ಮರ್ಯಾದೆ ಉಳಿಸಿದ್ದಾರೆ. ಇಲ್ಲದಿದ್ದರೆ ಇನ್ನೆಷ್ಟು ಅಧ್ವಾನವಾಗುತ್ತಿತ್ತೋ ದೇವರೇ ಬಲ್ಲ. ಆದರೆ, ದಾವಣಗೆರೆಯಲ್ಲಿ ಇವರು ಅಂದುಕೊಂಡಂತೆ ಆಟ ನಡೆಯಲಿಲ್ಲ. ಲೂಸ್ ಮಾದನ ಗುಂಡಾಟದಿಂದ ಕಾರ್ಯಕ್ರಮ ಪಕ್ಕಾ ತೋಪಾಯಿತು. ನಟರಿಗೂ ಅವಮಾನವಾಯಿತು. ವೇದಿಕೆ ಏರಿದ ಲೂಸ್ ಪಕ್ಕಾ ಲೂಸುಲೂಸಾಗಿಯೇ ಅಡಿ ಜನರು ಕ್ಯಾಕರಿಸಿ ನಗುವಂತೆ ಮಾಡಿಕೊಂಡ ಎನ್ನಲಾಗಿದೆ.
ಪಂದ್ಯವೇನೂ ಮುಂದೂಡಲ್ಪಟ್ಟಿದೆಯಾದರೂ, ಮತ್ತೆ ಪಂದ್ಯ ನಡೆಯುತ್ತಾ ಇಲ್ಲವೋ ಎಂಬುದು ಮಾತ್ರ ಖಚಿತವಲ್ಲ. ಅದಕ್ಕೆ ಕಾಲವೇ ಉತ್ತರಿಸಬೇಕು.