ಶನಿವಾರ ಸಂಜೆ ಇಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 57ನೇ ಫಿಲ್ಮ್‌ಫೇರ್ ಪ್ರಶಸ್ತಿ-2009 ಘೋಷಿಸಲಾಗಿದ್ದು, 'ಮಳೆಯಲಿ ಜೊತೆಯಲಿ' ಕನ್ನಡದ ಅತ್ಯುತ್ತಮ ಚಲನಚಿತ್ರ, ಅದರ ನಾಯಕ ನಟ ಗಣೇಶ್ ಅತ್ಯುತ್ತಮ ನಾಯಕ ನಟ, ಹಾಗೂ ಲವ್ ಗುರು ಚಿತ್ರದಲ್ಲಿ ಅದ್ಭುತ ಪಾತ್ರ ನಿರ್ವಹಣೆಗಾಗಿ ರಾಧಿಕಾ ಪಂಡಿತ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಹಿರಿಯ ಚಿತ್ರ ನಟ, ಮಂಡ್ಯದ ಗಂಡು ಅಂಬರೀಶ್ ಅವರಿಗೆ ಜೀವಮಾನ ಸಾಧನೆಯ ಪ್ರಶಸ್ತಿ ನೀಡಲಾಗಿದ್ದು, ಉಳಿದಂತೆ ಕನ್ನಡ ಚಿತ್ರರಂಗಕ್ಕೆ ಲಭ್ಯವಾದ ಪ್ರಶಸ್ತಿಗಳು ಈ ಕೆಳಗಿನಂತಿವೆ:
ಅತ್ಯುತ್ತಮ ಚಿತ್ರ: ಮಳೆಯಲಿ ಜೊತೆಯಲಿ ಅತ್ಯುತ್ತಮ ನಿರ್ದೇಶಕ: ಗುರುಪ್ರಸಾದ್ (ಎದ್ದೇಳು ಮಂಜುನಾಥ) ಅತ್ಯುತ್ತಮ ನಟ: ಗಣೇಶ್ (ಮಳೆಯಲಿ ಜೊತೆಯಲಿ) ಅತ್ಯುತ್ತಮ ನಟಿ: ರಾಧಿಕಾ ಪಂಡಿತ್ (ಲವ್ ಗುರು) ಅತ್ಯುತ್ತಮ ಪೋಷಕ ನಟ: ಅಚ್ಚುತ ಕುಮಾರ್ (ಜೋಶ್) ಅತ್ಯುತ್ತಮ ಪೋಷಕ ನಟಿ: ತುಳಸಿ ಶಿವಮಣಿ (ಜೋಶ್) ಅತ್ಯುತ್ತಮ ಸಂಗೀತ: ವಿ.ಹರಿಕೃಷ್ಣ (ರಾಜ್, ದಿ ಶೋಮ್ಯಾನ್) ಅತ್ಯುತ್ತಮ ಗಾಯಕ: ಚೇತನ್ (ಅಂಬಾರಿ ಚಿತ್ರದ 'ಯಾರೇ ನೀ ದೇವತೆಯಾ') ಅತ್ಯುತ್ತಮ ಗಾಯಕಿ: ಶಮಿತಾ ಮಲ್ನಾಡ್ (ಬಿರುಗಾಳಿ ಚಿತ್ರದ 'ಮಧುರ ಪಿಸು ಮಾತಿಗೆ') ಅತ್ಯುತ್ತಮ ಗೀತ ಸಾಹಿತ್ಯ: ಜಯಂತ ಕಾಯ್ಕಿಣಿ (ಮನಸಾರೆ ಚಿತ್ರದ 'ಎಲ್ಲೋ ಮಳೆಯಾಗಿದೆ')
ಯಜ್ಞಾ ಶೆಟ್ಟಿ ಹಾಗೂ ಶ್ರೀನಗರ ಕಿಟ್ಟಿ ಅವರು ತೀರ್ಪುಗಾರರ ವಿಶೇಷ ಗೌರವ ಪ್ರಶಸ್ತಿಗೆ ಪಾತ್ರರಾದರು.
ಉಳಿದಂತೆ, ತಮಿಳಿನ ನಾಡೋಡಿಗಳ್, ತೆಲುಗಿನ ಮಗಧೀರ ಮತ್ತು ಮಲಯಾಳಂನ ಪಳಸಿರಾಜ ಚಿತ್ರಗಳು ಆಯಾ ಭಾಷೆಯ ಅತ್ಯುತ್ತಮ ಚಿತ್ರಗಳಾಗಿ ಆಯ್ಕೆಯಾಗಿವೆ.
ತಮಿಳಿನಲ್ಲಿ ಕರ್ನಾಟಕ ಮೂಲದ ಪ್ರಕಾಶ್ ರಾಜ್ ಅವರು ಕಾಂಚೀವರಂ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ತೆಲುಗಿನಲ್ಲಿ ಅತ್ಯುತ್ತಮ ನಾಯಕಿ ನಟಿಯಾಗಿ ಅನುಷ್ಕಾ ಶೆಟ್ಟಿ (ಅರುಂಧತಿ ಚಿತ್ರ) ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ದಕ್ಷಿಣದ ನಾಲ್ಕು ಭಾಷೆಗಳ ಚಿತ್ರರಂಗಕ್ಕೆ ಒಟ್ಟು 40ಕ್ಕೂ ಹೆಚ್ಚು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಮಲಯಾಳಂನ ಪಳಸಿ ರಾಜ ಚಿತ್ರವು 7 ಪ್ರಶಸ್ತಿಗಳನ್ನು, ತೆಲುಗಿನ ಮಗಧೀರ 6 ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ, ತಮಿಳಿನ ಕಾಂಚೀವರಂ ಚಿತ್ರ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿತು.
ಅಂಬರೀಶ್ ಅವರೊಂದಿಗೆ ಮಲಯಾಳಂನ ಕೆಪಿಎಸಿ ಲಲಿತಾ ಅವರಿಗೂ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.