ನಾನಾ ರೂಪಗಳಲ್ಲಿ ನೀವು ಪುನೀತ್‌ರನ್ನು ನೋಡಿದ್ದೀರಿ. ಒಬ್ಬ ರಿಯಲ್ ಫೈಟ್ ಮಾಸ್ಟರ್ ಆಗಿ, ನುರಿತ ಅಭಿನಯದ ನಟನಾಗಿ, ಉತ್ತಮ ನೃತ್ಯಪಟುವಾಗಿ, ಅಭಿನಯ ಶೂರನಾಗಿ ಎಲ್ಲರಿಗೆ ಪರಿಚಿತ ಪುನಿತ್ ರಾಜ್ ಕುಮಾರ್.
ಇದೀಗ ಅವರು ಹಾಡಲು ಮುಂದಾಗಿದ್ದಾರೆ. ಮೈಕ್ ಸಹ ಕೈಗೆತ್ತಿಕೊಂಡಿದ್ದಾರೆ. ಇದರಲ್ಲೇನು ಮಹಾ ಅವರು ಸಾಕಷ್ಟು ಚಿತ್ರದಲ್ಲಿ ಹಾಡಿದ್ದಾರೆ, ವೇದಿಕೆ ಮೇಲೆ ಮೈಕ್ ಹಿಡಿದಿದ್ದಾರೆ. ಹೊಸ ಸುದ್ದಿಯ ರೀತಿ ಹೇಳುತ್ತಿದ್ದಾರೆ ಅಂದುಕೊಳ್ಳಬೇಡಿ. ನಮ್ಮ ಪುನಿತ್ ಮೊದಲ ಬಾರಿಗೆ ತಮ್ಮದಲ್ಲದ ಪಾತ್ರಕ್ಕೆ, ತಮ್ಮದಲ್ಲದ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಚಿತ್ರವೊಂದರ ನಾಯಕನಿಗಾಗಿ ಹಾಡುತ್ತಿದ್ದಾರೆ. ಆದ್ದರಿಂದ ಇದು ವಿಶೇಷ.
ಹೌದು ಡಾ. ರಾಜ್ ಕುಟುಂಬಕ್ಕೆ ತೀರಾ ನಿಕಟವರ್ತಿಯಾದ, ಸಾಕಷ್ಟು ಚಿತ್ರದಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿ ಗೆದ್ದಿರುವ ಉತ್ತಮ್ ಎಂಬ ಹುಡುಗ ಈಗ ನಾಯಕನಾಗಿದ್ದಾರೆ. ಈತನ 'ಯುವ ಸಾಮ್ರಾಟ್' ಚಿತ್ರದಲ್ಲಿನ ಒಂದು ಹಾಡಿಗೆ ಪುನಿತ್ ದನಿ ನೀಡುತ್ತಿದ್ದಾರೆ. 'ಭಲೇ ಭಲೆ ಪವರ್ ಆಫ್ ಯೂತ್' ಎಂಬ ಗೀತೆಗೆ ಅವರು ಕಂಠಸಿರಿ ನೀಡುತ್ತಿದ್ದಾರೆ. ಚಿತ್ರವನ್ನು ಗುರುದತ್ ನಿರ್ಮಿಸುತ್ತಿದ್ದಾರೆ. ಮಂಜು ಮಸ್ಕಲ್ಮಟ್ಟಿ ನಿರ್ದೇಶಕರು. ಒಟ್ಟಾರೆ ಚಿತ್ರದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆಲ್ ದಿ ಬೆಸ್ಟ್.