ಕೊನೆಗೂ ಸ್ಯಾಂಡಲ್‌ವುಡ್ ಕ್ರಿಕೆಟ್ ಮುಕ್ತಾಯವಾಗಿದೆ. ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಟಿ20 ಪಂದ್ಯಾವಳಿಯಲ್ಲಿ ಸಂಕಲನಕಾರರ ತಂಡ ಡಾ.ರಾಜ್ ಕಪ್ ಗೆದ್ದುಕೊಂಡಿದೆ. ವರುಣನ ಅಡ್ಡಿ, ಮಂದ ಬೆಳಕಿನ ನಡುವೆಯೂ ಕೊನೆಗೂ ಸಾಕಷ್ಟು ಏರುಪೇರುಗಳನ್ನು ಕಂಡಿದ್ದ ಸ್ಯಾಂಡಲ್‌ವುಡ್ ಕ್ರಿಕೆಟ್ ಮುಕ್ತಾಯ ಕಂಡಿದೆ.
ಫೈನಲ್ ಪಂದ್ಯಕ್ಕೂ ಮುನ್ನ ಕರ್ನಾಟಕ ಚಿತ್ರ ಕಲಾವಿದರ ಸಂಘ ಹಾಗೂ ಸಂಕಲನಕಾರರ ನಡುವೆ ಸೆಮಿಫೈನಲ್ ಹಣಾಹಣಿ ನಡೆಯಿತು. ಕಲಾವಿದರ ಸಂಘದ ನಾಯಕ ಸುದೀಪ್ ಕೇವಲ 18 ರನ್‌ಗಳಲ್ಲೇ ದೃವ್ ಬೌಲಿಂಗ್ ದಾಳಿಗೆ ಔಟಾಗುವ ಮೂಲಕ ಕಲಾವಿದರ ತಂಡ ಕೇವಲ 142 ರನ್ ಮಾತ್ರ ಪೇರಿಸಲು ಶಕ್ತವಾಯಿತು. ಈ ರನ್ ಮೊತ್ತವನ್ನು ಬೆನ್ನತ್ತಿದ ಸಂಕಲನಕಾರರ ತಂಡ ಕಲಾವಿದರನ್ನು ಸೋಲಿಸಿ ಫೈನಲ್ ಪ್ರವೇಶಿಸಿತು.
ಫೈನಲ್‌ಗೆ ಪ್ರವೇಶ ಪಡೆದಿದ್ದ ನಿರ್ದೇಶಕರ ತಂಡ ಪೇರಿಸಿದ 133 ರನ್‌ಗಳ ಸವಾಲನ್ನು ಬೆಂಬತ್ತಿದ ಸಂಕಲನಕಾರರು ಮತ್ತೆ ಫೈನಲ್‌ನಲ್ಲೂ ವಿಜಯಿಯಾಗುವ ಮೂಲಕ ರಾಜ್ ಕಪ್ ಗೆದ್ದರು. ಆ ಮೂಲಕ ಕೊನೆಗೂ ಸ್ಯಾಂಡಲ್‌ವುಡ್ ಕ್ರಿಕೆಟ್ ಮುಕ್ತಾಯವಾಯಿತು.
ಇವೆಲ್ಲವಕ್ಕೂ ಮುನ್ನ ಭರ್ಜರಿಯಾಗಿ ಪಂದ್ಯಾವಳಿ ನಡೆಸುವ ಬಗ್ಗೆ ಸ್ಯಾಂಡಲ್‌ವುಡ್ಡಿನ ಮಂದಿ ಹೇಳುತ್ತಾ ಬಂದಿದ್ದರೂ, ದಾವಣಗೆರೆಯಲ್ಲಿ ಪಂದ್ಯ ಅರ್ಧಕ್ಕೇ ನಿಂತಿತ್ತು. ಮಳೆಯ ಕಾರಣದ ಜೊತೆಗೆ ಇನ್ನೂ ಹತ್ತು ಹಲವು ಕಾರಣದಿಂದ ಪಂದ್ಯಾವಳಿ ನೀರಸವಾಯಿತು. ನಂತರ ಮತ್ತೆ ಬೆಂಗಳೂರಿಗೆ ಬಂದ ಪಂದ್ಯ ಕೊನೆಗೂ ಮುಕ್ತಾಯವಾಗಿದೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಂಘಿಕ ಬಲ ಇಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.