ಅಂಬಾರಿ ಚಿತ್ರದಲ್ಲಿ ಕಂಡ ಅರಳು ಕಂಗಳ ಚೆಲುವೆ ಸುಪ್ರೀತಾ ಅವರ ಕೈತುಂಬಾ ಚಿತ್ರಗಳಿವೆ ಈಗ. ಪ್ರಸ್ತುತ 2012ರಲ್ಲಿ ಬ್ಯುಸಿ ಆಗಿರುವ ಇವರು ಇದರ ಜತೆ ಈಗ 'ನೆನಪಿನಂಗಳ'ವನ್ನೂ ಒಪ್ಪಿಕೊಂಡಿದ್ದಾರೆ. ಇದೊಂದು ಹೊಸಬರ ಚಿತ್ರವಾಗಿದ್ದು, ಇದರಲ್ಲಿ ನಾಯಕಿಯಾಗಿ ಅವರು ಆಯ್ಕೆಯಾಗಿದ್ದಾರೆ.
ಧರ್ಮಚಂದ್ರ ಮಾವಿನಕಟ್ಟೆ ಎಂಬುವರು ಈ ನೆನಪಿನಂಗಳದ ಮೂಲಕ ನಿರ್ದೇಶಕ ಪಟ್ಟ ಏರುತ್ತಿದ್ದಾರೆ. ಈ ಹಿಂದೆ ಹಲವು ಹಿರಿಯ ನಿರ್ದೇಶಕರ ಕೈಕೆಳಗೆ ದುಡಿದ ಅನುಭವ ಇವರಿಗೆ ಇದೆ. ಚಿತ್ರದ ನಿರ್ಮಾಪಕ ಹಾಗೂ ನಾಯಕರಾಗಿ ಹೇಮಂತ್ ಎಂಬ ಹೊಸಬರು ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಅಪ್ಪಟ ಪ್ರೇಮ ಕಥೆ. ಹಲವು ಸುಂದರ ನೆನಪುಗಳನ್ನು ಚಿತ್ರದ ಕಥಾಹಂದರವಾಗಿ ಬಳಸಿಕೊಳ್ಳಲಾಗಿದೆ. ಪ್ರೇಮಿಗಳ ಮನಸ್ಸನ್ನು ಸಚಿತ್ರವಾಗಿ ಜನರ ಮುಂದೆ ತೆರೆದಿಡುವ ಕಾರ್ಯವನ್ನು ಈ ಚಿತ್ರ ಮಾಡಲಿದೆ ಎನ್ನಲಾಗುತ್ತಿದೆ. ಆ.20ಕ್ಕೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಇಷ್ಟು ದಿನ ದಿಗಂತ್ ಜತೆ ಪುತ್ರ ಚಿತ್ರದಲ್ಲೂ ಬ್ಯುಸಿ ಆಗಿದ್ದ ಸುಪ್ರೀತಾ ಆ ಚಿತ್ರ ಮುಗಿಸಿಕೊಂಡಿದ್ದಾರೆ. ಇದರ ಜತೆ 2012ರದ್ದು ಸಹ ಒಂದು ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಇದರಿಂದ ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ಚಿತ್ರಕ್ಕೆ ಸಿ.ಆರ್. ಬಾಬಿ ಸಂಗೀತ ಇದೆ. ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.