ಯೋಗೀಶ್ ಅಭಿನಯದ ಯಕ್ಷ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ತೆರೆಗೆ ಬರಲು ಸಿದ್ಧವಾಗಿದೆ. ಸಾಲು ಸಾಲು ಚಿತ್ರಗಳು ಸೋಲುತ್ತಿರುವ ಸಂದರ್ಭದಲ್ಲಿ ಒಂದು ಹಿಟ್ಗಾಗಿ ಕಾದಿರುವ ಯೋಗೀಶ್ ಅಲಿಯಾಸ್ ಲೂಸ್ ಮಾದಗೆ ಈ ಚಿತ್ರ ಕೈ ಹಿಡಿಯುತ್ತಾ ಕಾದು ನೋಡಬೇಕು.
ಕೇವಲ ಯೋಗೀಶ್ ಮಾತ್ರವಲ್ಲ ಈ ಚಿತ್ರದಲ್ಲಿ ನಾನಾ ಪಾಟೇಕರ್, ಅತುಲ್ ಕುಲಕರ್ಣಿ ಸಹ ಇರುವುದರಿಂದ ಚಿತ್ರ ಹೆಚ್ಚು ನಿರೀಕ್ಷೆಗಳನ್ನು ಹೊಂದಿದೆ. ದುನಿಯಾ ಚಿತ್ರ ನಾನು ತುಂಬಾ ಕಷ್ಟಪಟ್ಟು ಮಾಡಿದ ಚಿತ್ರ. ಆದರೆ ಯಕ್ಷ ತುಂಬಾ ಇಷ್ಟ ಪಟ್ಟು ಮಾಡಿದ ಚಿತ್ರ. ಇದೂ ಗೆಲ್ಲುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ನಿರ್ಮಾಪಕ ಸಿದ್ದರಾಜು.
ಚಿತ್ರ ನಿರ್ದೇಶಕ ರಮೇಶ್ ಭಾಗವತ್ ಅವರಿಗೆ ಇನ್ನೊಂದು ತೆರನಾದ ಖುಷಿಯಂತೆ. ಕನ್ನಡಕ್ಕೆ ನಾನಾ ಪಾಟೇಕರ್ ಅವರನ್ನು ಕರೆಸಿದ್ದೇನೆ. ಅವರ ಧ್ವನಿಯನ್ನು ಕನ್ನಡದಲ್ಲೂ ಕೇಳುವ ಅವಕಾಶ ಒದಗಿ ಬಂದಿದೆ. ಕೇವಲ 10 ದಿನದ ಕಾಲ್ಶೀಟ್ ನೀಡಿ ಬಂದಿದ್ದ ನಾನಾ, ಚಿತ್ರತಂಡವನ್ನು ಆತ್ಮೀಯವಾಗಿ ಬಳಸಿಕೊಂಡಿದ್ದರು. ಕಡಿಮೆ ಅವಧಿಯಲ್ಲಿ ಎಲ್ಲರನ್ನೂ ಪರಿಚಯಿಸಿಕೊಂಡು ಆತ್ಮೀಯತೆ ವ್ಯಕ್ತಪಡಿಸಿದರು. ಅವರೊಬ್ಬ ದೊಡ್ಡ ವ್ಯಕ್ತಿ ಎನ್ನುತ್ತಾರೆ.
ಚಿತ್ರ ಪ್ರತಿಯೊಂದೂ ವರ್ಗಕ್ಕೂ ಇಷ್ಟವಾಗುವ ರೀತಿ ಸಿದ್ಧವಾಗಿದೆ. ಬಜೆಟ್ ಬಗ್ಗೆ ನಿರ್ಮಾಪಕರು ಚಿಂತಿಸಿಲ್ಲ. ಇದರಿಂದ ಉತ್ತಮ ಗುಣಮಟ್ಟದಲ್ಲಿ ಚಿತ್ರ ಸಿದ್ಧವಾಗಿದೆ. ಗೆದ್ದೇ ಗೆಲ್ಲುತ್ತೆ ಅನ್ನುವ ವಿಶ್ವಾಸ ಇದೆ ಎನ್ನುತ್ತಾರೆ ನಾಯಕ ಯೋಗೀಶ್. ಅಂದಹಾಗೆ ಈ ಚಿತ್ರದ ಧ್ವನಿ ಸುರುಳಿ ಇತ್ತೀಚೆಗೆ ನಗರದಲ್ಲಿ ಬಿಡುಗಡೆಯಾಗಿದೆ.