ಕೈಯಲ್ಲಿ ಇನ್ನೆರಡು ಚಿತ್ರವಿದ್ರೂ ಜಿಂಕೆಮರಿ ರೇಖಾ ಅಮ್ಮ ಆದ್ಳು!
MOKSHA
ರೇಖಾ ಎಂಬ ಜಿಂಕೆಮರಿ ಕನ್ನಡ ಚಿತ್ರರಂಗಕ್ಕೆ ಬಂದು ಬಹುತೇಕ 10 ವರ್ಷಗಳೇ ಆಗಿವೆ. ಅತ್ತ ಆರಕ್ಕೇರದೆ, ಇತ್ತ ಮೂರಕ್ಕಿಳಿಯದೆ ರೇಖಾ ಆಗೀಗ ಗಾಂಧಿನಗರದಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಇದೀಗ ಮತ್ತೆ ಸಡನ್ನಾಗಿ ಬ್ಯುಸಿಯಾಗಿರುವ ಈ ಜಿಂಕೆ ಮರಿ ಅಮ್ಮನಾಗುತ್ತಿದ್ದಾರೆ.
ಅರೆರೆ ಮದುವೆನೇ ಆಗಿಲ್ಲ, ಅಷ್ಟರಲ್ಲಾಗಲೇ ಅಮ್ಮನಾ? ಅಂತ ಹುಬ್ಬೇರಿಸಬೇಡಿ. ರೇಖಾ ಶೀಘ್ರದಲ್ಲೇ ಅಮ್ಮನಾಗಿ ತೆರೆಯ ಮೇಲೆ ಕಾಣಿಸಲಿದ್ದಾರೆ. ಸದ್ಯದಲ್ಲೇ ತೆರೆಗಪ್ಪಳಿಸಲಿರುವ ಅಪ್ಪು ಪಪ್ಪು ಚಿತ್ರದಲ್ಲಿ ರೇಖಾ ಅಮ್ಮನ ಪಾತ್ರದಲ್ಲಿ ಕಾಣಿಸಲಿದ್ದಾರೆ. ಮಾ.ಸ್ನೇಹಿತ್ ಅಮ್ಮನಾಗಿ ರೇಖಾ ತಮಿಳಿನ ಅಬ್ಬಾಸ್‌ಗೆ ಜೋಡಿಯಾಗಿ ಬಣ್ಣ ಹಚ್ಚಿದ್ದಾರೆ.
ಇದರ ಜೊತೆಗೆ ರೇಖಾ ಇನ್ನಷ್ಟು ಕೆಲ ಚಿತ್ರಗಳಿಗೆ ಇದೀಗ ಸಹಿ ಹಾಕಿದ್ದಾರೆ. ದೂರ ಮುಂಬೈಯಲ್ಲಿದ್ದರೂ ಆಗೀಗ ಗಾಂಧಿನಗರಕ್ಕೆ ಬಂದು ಹೋಗುವ ರೇಖಾ ಕೈಯಲ್ಲೀಗ ಪ್ರೇಮ ಚಂದ್ರಮ ಹಾಗೂ ಜಾಲಿ ಬಾಯ್ ಎಂಬ ಇನ್ನೂ ಎರಡು ಚಿತ್ರಗಳಿವೆ. ಪ್ರೇಮ ಚಂದ್ರಮದಲ್ಲಿ ರಘು ಮುಖರ್ಜಿ ಎಂಬ ಚೆಲುವನಿಗೆ ಜೋಡಿಯಾಗುವ ಅವಕಾಶ ರೇಖಾಗೆ ದಕ್ಕಿದೆ. ಮತ್ತೊಂದು ಚಿತ್ರ ಜಾಲಿ ಬಾಯ್‌ನಲ್ಲಿ ಮತ್ತೊಬ್ಬ ಸುರಸುಂದರಾಂಗ ದೂದ್‌ಪೇಡ ಖ್ಯಾತಿಯ ದಿಗಂತ್‌ಗೆ ನಾಯಕಿಯಾಗಲಿದ್ದಾರೆ.
ಒಟ್ಟಾರೆ ಕನ್ನಡಿಗರು ಇನ್ನೇನು ಮರೆತುಬಿಟ್ಟರು ಅನ್ನೋವಾಗ ಆಗಿಗ ಎಂಟ್ರಿಯಾಗುತ್ತಿರುವ ರೇಖಾಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.